ಅದೊಂದು ಸುಂದರ ದೃಶ್ಯ ಕಾವ್ಯ...ಹಾಗಂತ ಕಲ್ಪನೆಯಲ್ಲ.. ಇದು ಕಲ್ಪನೆಗಳಿಗೂ ಸ್ಪಂದಿಸುವ ಜೊತೆಗೆ ಅದನ್ನೂ ಮೀರಿಸುವ ಆಟದ ಚಿತ್ತಾರ.. ಇದಕ್ಕೆ ಅಪಾರ ನಿರೀಕ್ಷೆಗಳನ್ನ ಗರಿಗೆದರುವಂತೆ ಮಾಡುವ ತಾಕತ್ ಇದೆ... ಟೀಕೆಗಳಿಗೆ ಉತ್ತರ ನೀಡುವ ಧಮ್ ಇದೆ… ಧುಮ್ಮಿಕ್ಕುವ ಜಲಪಾತದ ಭೋರ್ಗರೆತವೂ ಇದೆ... ಒಂದೇ ಏಟಿಗೆ ಅಪೋಶನ ತೆಗೆದುಕೊಳ್ಳುವ ಸುನಾಮಿಯ ಅಬ್ಬರವೂ ಇದೆ.. ಹಾಗೇ, ನೀಲ ಸಮುದ್ರದ ನಡುವಿನ ಶಾಂತಿಯೂ ಇದೆ. ಹೌದು..ಇದು ದೇವ್ರ ಆಟ.. ವಾಮನ ಮೂರ್ತಿಯ ತ್ರಿವಿಕ್ರಮವತಾರ...
ಈ ಆಟವನ್ನ ಬಣ್ಣಿಸಲು ಪದಪುಂಜಗಳು ಸಾಕಾಗೋದಿಲ್ಲ...ನಿಜ, ಈ ಜೀನಿಯಸ್ ಆಟಗಾರನ ಆಟದಲ್ಲಿ ಅಂತಹುದೊಂದು ಮಾಂತ್ರಿಕ ಸ್ಪರ್ಶವಿದೆ. ಇಲ್ಲಿ ಕೈಗೆಟುಕದ ಭಾವನೆಗಳ ಆಕರ್ಷಣೆ ಇದೆ... ಸಚಿನ್ ಅವ್ರ ಬ್ಯಾಟಿಂಗ್ ವೈಭವದ ಎದುರು ಭವಿಷ್ಯವೆಲ್ಲಾ ಮಸುಕು.. ಕ್ರಿಕೆಟ್ ದಾಖಲೆಗಳೆಲ್ಲಾ ಸದ್ಯ ವರ್ತಮಾನ.. ಮುಂದೆ ಅದೆಲ್ಲಾ ಭೂತಕಾಲದ ಗತ ವೈಭವ.. ಯಾಕಂದ್ರೆ ಮತ್ತೊಬ್ಬ ಸಚಿನ್ ತೆಂಡುಲ್ಕರ್‌ನ ಅವತಾರ ಅಸಾಧ್ಯ.
ಕ್ರಿಕೆಟ್.. ತನ್ನ ಬದುಕು ಅಂತ ಸಚಿನ್ ನಂಬಿಕೊಂಡಿದ್ದಾರೆ. ಆದ್ರೆ ಅಭಿಮಾನಿ ದೇವ್ರುಗಳು ಸಚಿನ್ ತಮ್ಮ ಉಸಿರು ಅಂತ ಭಾವಿಸಿಕೊಂಡೇ ಪೂಜೆ ಮಾಡ್ತಿದ್ದಾರೆ. ಹಾಗಂತ ತೆಂಡುಲ್ಕರ್ ಪವಾಡ ಪುರುಷ ಅಲ್ಲ.. ಆದ್ರೆ ಕ್ರಿಕೆಟ್‌ನಲ್ಲಿ ನಿಜವಾಗಿಯೂ ಪವಾಡ ಮಾಡಿದ್ದಾರೆ... ಮಾಡ್ತಾ ಇದ್ದಾರೆ. ಇದ್ರಿಂದ ಪ್ರತಿ ಪಂದ್ಯದಲ್ಲೂ ಸಚಿನ್ ಮೇಲೆ ಅಭಿಮಾನಿಗಳ ಆಪೇಕ್ಷೆ ಜಾಸ್ತಿಯಾಗಿರುತ್ತೆ. ಹಾಗೇ, ಅಭಿಮಾನಿಗಳ ಆಪೇಕ್ಷೆಗಳನ್ನ ಈಡೇರಿಸಲು ಸಚಿನ್ ಪಡುವ ಕಷ್ಟ ಅಷ್ಟಿಷ್ಟಲ್ಲ..ಅದಕ್ಕಾಗಿ ಲೆಕ್ಕವಿಲ್ಲದಷ್ಟು ಬೆವರ ಮಹಾಪೂರವನ್ನೇ ಸುರಿಸಿದ್ದಾರೆ. ಅದಕ್ಕಾಗಿಯೇ ಸಚಿನ್.. ಗಾಡ್ ಆಫ್ ಕ್ರಿಕೆಟ್.
ಆದ್ರೆ ಕ್ರಿಕೆಟ್ ದೇವ್ರ ಕಿರೀಟದಲ್ಲಿ ಒಂದು ಗರಿ ಮಾತ್ರ ಇನ್ನೂ ಸೇರ್ಕೊಂಡಿಲ್ಲ. ತನ್ನ ವರ್ಣ ರಂಜಿತ ಕ್ರಿಕೆಟ್ ಬದುಕಿನಲ್ಲಿ ವಿಶ್ವಕಪ್ ಗೆಲ್ಲಲು ಆಗಲಿಲ್ಲ ಅನ್ನೋ ವಿಷಾದವಿದೆ. ವಿಶ್ವಕಪ್ ಟ್ರೋಫಿ ತನಗೆ ಮರೀಚಿಕೆಯಾಗಿದೆ ಎಂಬ ನೋವಿದೆ. ಐದು ಬಾರಿ ವಿಶ್ವಕಪ್ ತನ್ನ ಕೈಯಿಂದ ಶರವೇಗದಲ್ಲೇ ಮಾಯವಾಗಿದೆ ಅನ್ನೋ ನಿರಾಸೆ ಇದೆ. ಇದೀಗ ಬಲೂ ದೂರದಿಂದಲೇ ವಿಶ್ವಕಪ್ ಟ್ರೋಫಿ ಮತ್ತೆ ಮಿನುಗುತ್ತಿದೆ. ಆರನೇ ಬಾರಿ ಮತ್ತೊಮ್ಮೆ ತೆಂಡುಲ್ಕರ್ ಅವ್ರ ಕಣ್ಣಂಚಿನಲ್ಲಿ ವಿಶ್ವಕಪ್ ಟ್ರೋಫಿ ಹೊಳೆಯುತ್ತಿದೆ. ಅದೂಗಿರಿ ವಜ್ರದ ಹಾಗೇ....
ಇದೀಗ ಧೋನಿಯ ದಂಡನಾಯಕತ್ವಕ್ಕೆ ಸಚಿನ್ ಸಾರಥಿಯಾಗಿದ್ದಾರೆ. ವಿಶ್ವಕಪ್ ಆಶ್ವಮೇಧಕ್ಕೆ ಧೋನಿ ಪಾತ್ರಧಾರಿಯಾದ್ರೆ, ಸಚಿನ್ ಸೂತ್ರಧಾರಿ.. ಧೋನಿ ಹುಡುಗರು ಈಗಾಗಲೇ ಸಚಿನ್‌ಗೋಸ್ಕರ ವಿಶ್ವಕಪ್ ಗೆದ್ದೇ ಗೆಲ್ತಿವಿ ಅಂತ ಪಣ ತೊಟ್ಟಿದ್ದಾರೆ. ಆದ್ರೆ ಸಚಿನ್ ಮನ ದೇಶಕ್ಕಾಗಿ ತುಡಿಯುತ್ತಿದೆ. ಧೋನಿ ಹುಡುಗರು ತನಗಾಗಿ ಟ್ರೋಫಿ ಗೆದ್ರೆ ಅದು ಕೋಟಿ ಕೋಟಿ ಭಾರತೀಯರಿಗೆ ಗೆದ್ದಂತೆ ಎಂಬುದು ತೆಂಡುಲ್ಕರಿಗೂ ಗೊತ್ತು. ಯಾಕಂದ್ರೆ ಇಡೀ ಕ್ರಿಕೆಟ್ ಜಗತ್ತೆ ಮಾಸ್ಟರ್‌ನ ಆಟಕ್ಕೆ ಸಲಾಂ ಅನ್ನುತ್ತಿದೆ.
ಹೌದು, ವಿಶ್ವಕಪ್‌ನಲ್ಲಿ ಸಚಿನ್ ಆಟವನ್ನ ಯಾವತ್ತೂ ಮರೆಯೋಕೆ ಆಗೊಲ್ಲ. ಪ್ರತಿ ಇನಿಂಗ್ಸ್ ಕೂಡ ಕಣ್ಣಿಗೆ ಕಟ್ಟುವಂತಿದೆ. 1992ರ ವಿಶ್ವಕಪ್‌ನಲ್ಲೇ ಗಮನ ಸೆಳೆದ ಮುಂಬೈಕರ್, 1996ರ ವಿಶ್ವಕಪ್ ಅನ್ನು ಪೂರ್ತಿಯಾಗಿ ಕೈವಶ ಮಾಡ್ಕೊಂಡ್ರು. ಆದ್ರೂ ಪ್ರಶಸ್ತಿ ಹಂತ ತಲುಪಲು ಸಾಧ್ಯವಾಗಲಿಲ್ಲ. ಹಾಗೇ 1999ರ ವಿಶ್ವಕಪ್... ತೆಂಡುಲ್ಕರ್ ಅವ್ರ ದೇಶ ಪ್ರೇಮಕ್ಕೆ ಸಾಕ್ಷಿಯಾದ ಟೂರ್ನಿ. ತಂದೆಯ ಸಾವಿನ ನೋವಿನಲ್ಲೂ ತಂಡವನ್ನ ಸೇರ್ಕೊಂಡ್ರು. ಅಲ್ಲದೆ ಶತಕದ ಸಿಂಚನದೊಂದಿಗೆ ಆಕಾಶವನ್ನ ಒಂದು ಕ್ಷಣ ದಿಟ್ಟಿಸಿ ತಂದೆಗೆ ಅರ್ಪಣೆ ಮಾಡಿದ ಕ್ಷಣವನ್ನ ಎಂದಾದ್ರೂ ಮರೆಯುವುದುಂಟೆ...
ಇನ್ನು, 2003ರ ವಿಶ್ವಕಪ್.. ನೋವಿನಲ್ಲೂ ತಂಡಕ್ಕಾಗಿ ಆಡಿದ ವೀರ ಸೇನಾನಿ . ಆದ್ರೆ ಫೈನಲ್ ಪಂದ್ಯದಲ್ಲಿ ಮಿಂಚಲು ವಿಫಲರಾದಾಗ ಭಾರತದ ಗೆಲುವಿನ ಕನಸುಕೂಡ ಭಗ್ನಗೊಂಡಿತ್ತು. ಪ್ರಶಸ್ತಿ ಗೆಲ್ಲುವ ಕನಸು ಕನಸಾಗಿಯೇ ಉಳಿಯಿತ್ತು. ಮತ್ತೊಂದೆಡೆ, 2007ರ ಕೆರೆಬಿಯನ್ ವಿಶ್ವಕಪ್‌ನ ಹೀನಾಯ ಸೋಲನ್ನ ಸಚಿನ್ ಇವತ್ತಿಗೂ ಮರೆತಿಲ್ಲ.
ಇದೀಗ ಎಲ್ಲಾ ಕಹಿ ನೆನಪುಗಳಿಗೆ ಉತ್ತರ ನೀಡಲು ಸಚಿನ್ ಸನ್ನದ್ಧರಾಗಿದ್ದಾರೆ. ವಿಶ್ವಕಪ್ ಗೆಲ್ಲಲೇಬೇಕು ಅಂತ ಮಾಸ್ಟರ್ , ಮಾಸ್ಟ ರ್ ಪ್ಲಾನ್ ಹಾಕೊಂಡಿದ್ದಾರೆ. ಹಾಗಂತ ಧೋನಿ ಬಾಯ್ಸ್ ಸಚಿನ್ ಆಸೆಯನ್ನ ಈಡೇರಿಸುತ್ತಾರಾ... ವಿಶ್ವಕಪ್ ಟ್ರೋಫಿಗೂ ಸಚಿನ್ ಅವ್ರ ಮುತ್ತಿನ ಸಿಹಿಮಳೆಯಾಗುತ್ತಾ... ಯಾವುದಕ್ಕೂ ಕಾಲವೇ ಉತ್ತರನೀಡಲಿದೆ.
ಅಂದ ಹಾಗೇ, ಇದು, ಸುಮಾರು 32 ವರ್ಷಗಳ ಹಿಂದಿನ ಸತ್ಯ ಕಥೆ. .. ಬ್ಯಾಟ್‌ಗಿಂತ ಸ್ವಲ್ಪ ಉದ್ದಗಿದ್ದ ಪೋರ ಸಚಿನ್, ಶಿವಾಜಿ ಪಾರ್ಕ್ ಅಂಗಣದಲ್ಲಿ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ರು.. ಗುರು ರಮಕಾಂತ್ ಅಚ್ರೇಕರ್ ಹೇಳಿಕೊಡುವ ಒಂದೊಂದು ಟಿಪ್ಸ್ ಗಳಿಂದ ಪ್ರೇರಿತನಾದ ಸಚಿನ್ ಬದುಕಿನ ಬಗ್ಗೆ ಸುಂದರ ಕನಸುಗಳನ್ನ ಕಾಣತೊಡಗಿದ್ರು. ಅದನ್ನು ನನಸಾಗಿಸಲು ಬಾಲಕ ಸಚಿನ್ ಹಲವು ಸವಾಲುಗಳನ್ನ ಎದುರಿಸಬೇಕಾಯ್ತು. ಒಂದೊಂದು ಸವಾಲುಗಳನ್ನ ದಾಟಿ ಬರುವಾಗ ಸಾಕಷ್ಟು ನಿರಾಸೆ ಅನುಭವಿಸಿದ್ರೂ ಛಲ ಮತ್ತು ಹಠವನ್ನ ಬಿಡಲಿಲ್ಲ.
ಗುರುವಿನ ಪಾಠದ ಬಳಿಕ, ಸಚಿನ್ ನದ್ದು ಏಕಲವ್ಯನ ರೀತಿಯ ಅಭ್ಯಾಸ. ರಾತ್ರಿಯಾದ ಮೇಲೆ ಮನೆ ಸೇರಬೇಕಾದ್ರೆ ಎರಡೆರಡು ಬಸ್‌ಗಳಲ್ಲಿ ಸಂಚಾರ ಮಾಡಬೇಕಾಗಿತ್ತು. ಇನ್ನು, ಮುಂಬೈನ ಬೆಸ್ಟ್ ಬಸ್‌ನಲ್ಲಿ ಸಂಚಾರ ಮಾಡುವುದೆಂದರೆ ಅದು ತಮಾಷೆಯ ಸಂಗತಿಯಲ್ಲ. ತನಗಿಂತ ದೊಡ್ಡದಾಗಿದ್ದ ಕ್ರಿಕೆಟ್ ಕಿಟ್ ಅನ್ನ ಹೊತ್ಕೊಂಡು, ನೂಕು ನುಗ್ಗಲುಗಳನ್ನ ತಪ್ಪಿಸಿಕೊಳ್ಳಲು ಸಚಿನ್ ಬೆಸ್ಟ್ ಬಸ್‌ನ ಡ್ರೈವರ್‌ಗಳನ್ನ ದೊಸ್ತ್ ಮಾಡ್ಕೊಂಡಿದ್ರು..
ಆದ್ರೆ ಇವೆಲ್ಲಾ ಹೆಚ್ಚು ದಿನ ಇರಲಿಲ್ಲ. ಮನೆ, ಪಾಠಕ್ಕಿಂತ ಸಚಿನ್ ಹೆಚ್ಚು ಕ್ರಿಕೆಟ್‌ನತ್ತ ಆಸಕ್ತಿ ಹೊಂದಿರುವುದರಿಂದ ಅಣ್ಣ ಅಜಿತ್ ತೆಂಡುಲ್ಕರ್ ಸಚಿನ್‌ಗೆ ಸ್ಪೂರ್ತಿಯ ಚಿಲುಮೆಯಾದ್ರು. ಇದ್ರಿಂದ ಸಚಿನ್ ಕ್ರಿಕೆಟ್ ಅಭ್ಯಾಸಕ್ಕಾಗಿಯೇ ಶಿವಾಜಿ ಪಾರ್ಕ್ ಬಳಿ ಇರುವ ತಮ್ಮ ಚಿಕ್ಕಮ್ಮನ ಮನೆಯನ್ನ ಆಯ್ಕೆ ಮಾಡ್ಕೊಂಡ್ರು. ಅಭ್ಯಾಸ ಮಾಡಿ ಸುಸ್ತಾಗಿದ್ದ ಸಚಿನ್ ಒಂದೊಂದು ದಿನ ಊಟವನ್ನೂ ಬಿಟ್ಟು ಮಲಗ್ತಾ ಇದ್ರು. ಕೆಲವೊಂದು ಸಲ ಕ್ರಿಕೆಟ್ ಆಟದ ಬಗ್ಗೆನೇ ರಾತ್ರಿ ಇಡೀ ಯೋಚನೆ ಮಾಡ್ತಾ ಇದ್ರು.
ನಂತ್ರ ನಡೆದದ್ದು ಈಗ ಇತಿಹಾಸ.. ಸಿಂಹಾವಲೋಕನ ಮಾಡಿದಾಗ ಅಬ್ಬಾ ಅನ್ಸುತ್ತೆ.. ರಣಜಿ ಟ್ರೋಫಿ ದುಲೀಪ್ ಟ್ರೋಫಿ, ಇರಾನಿ ಟ್ರೋಫಿಯಲ್ಲಿ ಶತಕ ಸಿಡಿಸಿದ ಬಾಲಕ ಸಚಿನ್ ತನ್ನ 16ರ ಹರೆಯದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ರಣಕಹಳೆ ಊದಿದ್ರು. ಅಲ್ಲಿಂದ ಶುರುವಾಯ್ತು ಸಚಿನ್ ತೆಂಡುಲ್ಕರ್ ಅವ್ರ ದರ್ಬಾರು..
.ಕಳೆದ 22 ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚಕ್ರವರ್ತಿಯಾಗಿ ಮೆರೆಯುತ್ತಿರುವ ತೆಂಡುಲ್ಕರ್ ಅವ್ರ ಸಾಧನೆ, ದಾಖಲೆಗಳ ಪ್ರತಿ ಹೆಜ್ಜೆಯೂ ಯುವ ಆಟಗಾರರಿಗೆ ದಾರಿದೀಪ. ಒಬ್ಬ ಸಾಮಾನ್ಯ ಬಾಲಕ ಅಸಾಮಾನ್ಯನಾಗಿ ಬೆಳೆದುಬಂದ ಪರಿಯನ್ನ ನೋಡಿದಾಗ ಒಂದು ಕ್ಷಣ ಅಚ್ಚರಿಯಾಗುತ್ತೆ. ಏನೇ ಅದ್ರೂ ಸಚಿನ್ ಯುಗಪುರುಷ.. .
ಸನತ್ ರೈ
Thursday, March 10, 2011
Subscribe to:
Posts (Atom)