Wednesday, November 17, 2010

ಪಟೇಲರ ಮುಸಿ ಮುಸಿ ನಗು

ಕೆಎಸ್‌ಸಿಎ ಸರ್ವಾಧಿಕಾರಿಯಾಗಿದ್ದ ಬ್ರಿಜೇಶ್‌ ಪಟೇಲ್‌ ಈ ಬಾರಿಯ ಕೆಎಸ್‌ಸಿಎ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಆದ್ರೆ, ಚುನಾವಣಾ ಅಖಾಡದಲ್ಲಿ ಶಕುನಿ ಥರಾ ಪಟೇಲರು ದಾಳ ಉದುರಿಸಿದ್ದಾರೆ. ಜಾಣ್ಮೆಯಿಂದ ಅನಿಲ್‌ ಕುಂಬ್ಳೆ ಬಣವನ್ನ ತಮ್ಮತ್ತ ಸೆಳೆದುಕೊಂಡ ಬ್ರಿಜೇಶ್‌ ಪಟೇಲ್‌ ಮಹಾರಾಜ ಬಣಕ್ಕೆ ಸಡ್ಡು ಹೊಡೆಯುವ ಪ್ಲಾನ್‌ ಮಾಡ್ಕೊಂಡಿದ್ರು. ಬಹಿರಂಗವಾಗಿ ಅನಿಲ್‌ಕುಂಬ್ಳೆ ಬಳಗಕ್ಕೆ ನೋವಿನಿಂದಲೇ ಬೆಂಬಲ ವ್ಯಕ್ತ ಪಡಿಸಿದ್ದ ಪಟೇಲರು ಮುಸಿಮುಸಿ ನಗುತ್ತಿದ್ರು. ಅದ್ರಲ್ಲೂ ತಮ್ಮ ಬಣದ ಬೆಂಬಲಿಗರನ್ನ ಕುಂಬ್ಳೆ ಬಳಗಕ್ಕೆ ಸೇರಿಸಿಕೊಂಡ ಪಟೇಲರು ಕೆಎಸ್‌ಸಿಎ ಆಡಳಿತದಲ್ಲಿ ಸುಲಭವಾಗಿ ಮೂಗು ತೂರಿಸುವ ಲೆಕ್ಕಾಚಾರ ಹಾಕಿಕೊಂಡಿದ್ರು. ಆದ್ರೆ ಪಟೇಲರ ಗೇಮ್‌ ಪ್ಲಾನ್‌ ಇದೀಗ ವರ್ಕ್ ಔಟ್‌ ಆಗುತ್ತಿಲ್ಲ. ಬ್ರಿಜೇಶ್‌ ಪಟೇಲ್‌ ಅಂದುಕೊಂಡಷ್ಟು ಸುಲಭವಾಗಿ ಕುಂಬ್ಳೆ ಬಳಗ ಮಣೆ ಹಾಕ್ತಾ ಇಲ್ಲ. ಇದ್ರಿಂದ ಪಟೇಲ್‌ ಬೆಂಬಲಿಗರು ಸಹ ಕುಂಬ್ಳೆ ಬಣಕ್ಕೆ ಸರ್ಪೋರ್ಟ್ ಮಾಡ್ತಾ ಇಲ್ಲ ಅನ್ನೋ ಹೊಸ ಸುದ್ದಿ ಕೆಎಸ್‌ಸಿಎ ಚಾವಡಿಯಿಂದ ಹೊರಬಿದ್ದಿದೆ.
ಹಾಗೇ ನೋಡಿದ್ರೆ ,ಮಹಾರಾಜ ಮತ್ತು ಕುಂಬ್ಳೆ ಬಳಗದ ಉದ್ದೇಶ ಒಂದೇ ಆಗಿತ್ತು. ಕೆಎಸ್‌ಸಿಎ ಆಡಳಿತ ಚುಕ್ಕಾಣಿಯಿಂದ ಬ್ರಿಜೇಶ್‌ಪಟೇಲ್‌ ಕೆಳಗಿಳಿಯಬೇಕು. ಇದಕ್ಕಾಗಿ ಮಹಾರಾಜ ಬಣ ಕಳೆದ ಚುನಾವಣೆಯಲ್ಲಿ ಸಾಕಷ್ಟು ಪ್ರಯತ್ನ ನಡೆಸಿತ್ತು. ಆದ್ರೂ ಅದೂ ಸಂಪೂರ್ಣವಾಗಿ ಸಫಲವಾಗಲಿಲ್ಲ. ಆದ್ರೆ ಈ ಬಾರಿ ಶ್ರೀನಾಥ್‌ ಮತ್ತು ಕುಂಬ್ಳೆ ಬಳಗದ ಎಂಟ್ರಿಯಿಂದ ಬ್ರಿಜೇಶ್‌ಪಟೇಲ್‌ ಕೆಎಸ್‌ಸಿಎ ಚಾವಡಿಯಿಂದ ಅನಿವಾರ್ಯವಾಗಿ ಹೊರನಡೆಯುವ ತೀರ್ಮಾನ ತೆಗೆದುಕೊಂಡ್ರು.
ಆದ್ರೂ ಪಟೇಲರು ಸುಮ್ಮನೆ ಕೂತಿಲ್ಲ. ಮಹಾರಾಜ ಮತ್ತು ಅನಿಲ್‌ ಬಣದ ಸಂಬಂಧವನ್ನು ಚಾಣಕ್ಯ ತಂತ್ರದಿಂದ ಹದಗೆಡುವಂತೆ ಮಾಡಿದ್ರು. ಈ ಹಿಂದೆ ಮಹಾರಾಜ ಬಣ ಮತ್ತು ಕುಂಬ್ಳೆ ಬಳಗ ಜತೆಯಾಗಿಯೇ ಚುನಾವಣಾ ಕಣಕ್ಕೆ ಧುಮುಕುವ ಪ್ಲಾನ್‌ ಮಾಡ್ಕೊಂಡಿತ್ತು. ಆದ್ರೆ ಕ್ರಿಕೆಟರ್‌ಗಳೇ ಕೆಎಸ್‌ಸಿಎ ಆಡಳಿತ ನಡೆಸಬೇಕು ಎಂಬ ಪಟೇಲರ ಹೊಸ ರಾಗ ಯಾಕೋ ಜಂಬೋ ಬಳಗದ ಕಿವಿಯನ್ನ ಇಂಪು ಮಾಡಿತ್ತು. ಪರಿಣಾಮ, ಕುಂಬ್ಳೆ ಬಳಗ ಪಟೇಲರ ಮಾತಿಗೆ ಕುಣಿದು ಮಹಾರಾಜ ಬಣವನ್ನ ಎದುರು ಹಾಕೊಂಡು ಈಗ ಚುನಾವಣಾ ಕಣಕ್ಕೆ ಧುಮುಕಿದೆ.
ಹಾಗೇ ಕುಂಬ್ಳೆ ಬಣಕ್ಕೆ ತಿರುಗೇಟು ನೀಡಲು ಮಹಾರಾಜ ಬಣ ಕೂಡ ರಣತಂತ್ರಗಳನ್ನ ರೂಪಿಸಿಕೊಂಡಿದೆ. ಡಾ. ಕೃಷ್ಣಮೂರ್ತಿ, ದೊರೈಸ್ವಾಮಿ, ಕಸ್ತೂರಿ ರಂಗನ್‌, ಮೊದಲಾದವರ ಬೆಂಬಲ ಪಡೆದಿರುವ ಮಹಾರಾಜರು ಅನಿಲ್‌ಬಳಗಕ್ಕೆ ಕ್ರೀಡಾ ಮನೋಭಾವದ ಸ್ಪರ್ಧೆಯನ್ನ ಒಡ್ಡಲು ಸಿದ್ಧತೆಗಳನ್ನ ಮಾಡ್ಕೊಂಡಿದ್ದಾರೆ .
ಒಟ್ಟಿನಲ್ಲಿ ಪಟೇಲರ ಕುಮ್ಮಕ್ಕಿನಿಂದ ಕೆಎಸ್‌ಸಿಎ ಚುನಾವಣೆ ನಡೆಯುತ್ತಿದೆ. ಹಾಗಂತ ಇನ್ನೂ ಕಾಲ ಮಿಂಚಿಲ್ಲ, ರಾಜ್ಯ ಕ್ರಿಕೆಟ್‌ನ ಹಿತದೃಷ್ಟಿಯಿಂದ ಎಲ್ಲವನ್ನ ಮರೆತು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರ ನಡೆಸುವ ಚಿನ್ನದಂತಹ ಅವಕಾಶ ಅನಿಲ್‌ ಬಳಗಕ್ಕಿದೆ. ಇದನ್ನು ಸದುಪಯೋಗಪಡಿಸಿಕೊಳ್ಳುವ ಜಾಣ್ಮೆ ಮಾತ್ರ ಜಂಬೋ ಕೈಯಲ್ಲಿದೆ.
ಸನತ್ ರೈ

ಕ್ರಿಕೆಟ್‌ ಪಿಚ್‌ ಎಂಬ ಗರ್ಲ್‌ ಫ್ರೆಂಡ್‌

ಕ್ರಿಕೆಟ್‌ ಪಿಚ್‌ ಒಂದೇ... ಗರ್ಲ್‌ ಫ್ರೆಂಡ್‌ ಒಂದೇ... ಯಾಕಂದ್ರೆ ಪ್ರೇಯಸಿಯ ವರ್ತನೆ ಮತ್ತು ಕ್ರಿಕೆಟ್‌ ಪಿಚ್‌ ನ ಮರ್ಮವನ್ನ ತಿಳಿದುಕೊಳ್ಳುವುದು ತುಂಬಾನೇ ಕಷ್ಟ. ಯಾವಾಗ ಹೆಂಗೆ ತಿರುಗಿ ಬೀಳುತ್ತೆ ಅನ್ನೋದು ಅನುಭವಿಸಿದವರಿಗೆ ಮಾತ್ರ ಗೊತ್ತು. (change over ಆಗಿದೆ)
ಇದೀಗ ಇಂತಹುದೇ ಅನುಭವ ಟೀಮ್ ಇಂಡಿಯಾ ಆಟಗಾರರಿಗೆ ಆಗಿದೆ. ನ್ಯೂಜಿಲೆಂಡ್‌ ವಿರುದ್ಧ ಅಹಮದಾಬಾದ್‌ ಮತ್ತು ಹೈದ್ರಬಾದ್‌ ಟೆಸ್ಟ್‌ ಪಂದ್ಯಗಳಲ್ಲಿ ಧೋನಿ ಹುಡುಗರಿಗೆ ತವರಿನ ಲಾಭ ಪಡೆಯಲು ಸಾಧ್ಯವಾಗಲಿಲ್ಲ. ವೆಟ್ಟೋರಿ ಪಡೆಯನ್ನ ಕಟ್ಟಿಹಾಕಲು ಟೀಮ್‌ ಇಂಡಿಯಾ ಬೌಲರ್‌ಗಳು ಹರಸಾಹಸ ಮಾಡಿದ್ರೂ ಪ್ರಯೋಜನವೇನೂ ಆಗಲಿಲ್ಲ.

ಅದ್ರಲ್ಲೂ ಟೀಮ್ ಇಂಡಿಯಾಗೆ ತವರಿನಲ್ಲಿ ಸ್ಪಿನ್ನರ್ ಗಳೇ ಟ್ರಂಪ್‌ ಕಾರ್ಡ್. ಆದ್ರೆ ಹರ್ಭಜನ್‌ ಸಿಂಗ್‌ ಮತ್ತು ಪ್ರಗ್ಯಾನ್‌ ಓಜ್ಹಾ ಎರಡು ಟೆಸ್ಟ್‌ ಪಂದ್ಯಗಳಲ್ಲಿ ವಿಕೆಟ್‌ ಕಬಳಿಸಲು ವಿಫಲರಾದ್ರು. ಪ್ರಮುಖ ಆಫ್‌ ಸ್ಪಿನ್ನರ್‌ ಹರ್ಭಜನ್‌ 305 ರನ್‌ ನೀಡಿ ಆರು ವಿಕೆಟ್‌ಪಡೆದ್ರೆ, ಪ್ರಗ್ಯಾನ್‌ ಓಜ್ಹಾ 324 ರನ್‌ ನೀಡಿ ಕಬಳಿಸಿದ್ದು ಕೇವಲ ಏಳು ವಿಕೆಟ್‌ ಮಾತ್ರ.

ಆದ್ರೆ ಈ ಹಿಂದೆ ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಆಸ್ಟ್ರೇಲಿಯಾ ವಿರುದ್ಧ ಕಾನ್ಪುರ, ನಾಗ್ಪುರ ಮತ್ತು ಮುಂಬೈ ಟೆಸ್ಟ್‌ ಪಂದ್ಯಗಳ ಗೆಲುವಿನಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸಿದ್ರು. ಮುಖ್ಯವಾಗಿ ಹರ್ಭಜನ್‌ ಸಿಂಗ್‌ ಎದುರಾಳಿ ತಂಡಗಳಿಗೆ ಕಂಟಕವಾಗಿ ಪರಿಣಮಿಸಿದ್ರು. (change over ಆಗಿದೆ)
ಹಾಗಾದ್ರೆ, ನ್ಯೂಜಿಲೆಂಡ್‌ ವಿರುದ್ಧ ಆಗಿದ್ದಾದ್ರೂ ಏನು ? . ಕೆಲವು ದಿನಗಳ ಹಿಂದೆಯಷ್ಟೇ ಬಲಿಷ್ಠ ಆಸ್ಟ್ರೇಲಿಯನ್ನರಿಗೆ ಮುಖಭಂಗ ಮಾಡಿದ್ದ ಟೀಮ್ ಇಂಡಿಯಾಗೆ ನ್ಯೂಜಿಲೆಂಡ್‌ ವಿರುದ್ಧ ಗೆಲ್ಲಲು ಯಾಕೆ ಸಾಧ್ಯವಾಗಲಿಲ್ಲ. ಆಗೀನ ಪಿಚ್‌ಗೂ ಈಗೀನ ಪಿಚ್‌ಗೂ ವ್ಯತ್ಯಾಸವಿದೆಯೇ.. ಹೀಗೆ ಅನೇಕ ಪ್ರಶ್ನೆಗಳು ಕಾಡುತ್ತವೆ.

ಇನ್ನೊಂದೆಡೆ, ಟೀಮ್ ಇಂಡಿಯಾ ನಾಯಕ ಎಮ್‌.ಎಸ್‌. ಧೋನಿ, ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೆ ತವರಿನ ತಂಡಕ್ಕೆ ನೆರವಾಗುವ ಪಿಚ್‌ ಅನ್ನು ತಯಾರಿಸಿಲ್ಲ ಅಂತ ಖಡಕ್‌ ಆಗಿ ಹೇಳಿದ್ದಾರೆ. ಇಂತಹ ಪಿಚ್‌ಗಳಲ್ಲಿ ಫಲಿತಾಂಶವನ್ನ ಐದು ದಿನಗಳಲ್ಲಿ ನಿರೀಕ್ಷೆ ಮಾಡುವಂತಿಲ್ಲ. ಕನಿಷ್ಠ ಹತ್ತು ದಿನಗಳಾದ್ರೂ ಬೇಕು ಅನ್ನೋದು ಧೋನಿಯ ನೇರ ಆರೋಪವಾಗಿತ್ತು. ಇದು ನಿಜ ಕೂಡ.ಸತ್ವವೇ ಇಲ್ಲದಪಿಚ್‌ನಲ್ಲಿ ಬೌಲರ್‌ಗಳು ಬಳಲಿ ಬೆಂಡಾದ್ರೆ, ಬ್ಯಾಟ್ಸ್‌ ಮನ್‌ಗಳು ಮಾತ್ರ ರನ್‌ಮಳೆಯನ್ನೇ ಸುರಿಸಿದ್ರು.

ಹಾಗಾದ್ರೆ, ಬಿಸಿಸಿಐ ಏನು ಮಾಡುತ್ತಿದೆ. ವಿಶ್ವದ ಶ್ರೀಮಂತ ಕ್ರಿಕೆಟ್‌ ಮಂಡಳಿ ಎಂಬ ಹೆಗ್ಗಳಿಕೆ ಪಡೆದಿರುವ ಬಿಸಿಸಿಐ ಗುಣಮಟ್ಟದ ಪಿಚ್‌ಗಳನ್ನ ಯಾಕೆ ನಿರ್ಮಾಣ ಮಾಡುತ್ತಿಲ್ಲ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌ ಸೇರಿದಂತೆ ಬಹುತೇಕ ಕ್ರಿಕೆಟ್‌ ಮಂಡಳಿಗಳು ತಮಗೆ ಬೇಕಾದ ಹಾಗೇ ಪಿಚ್‌ ಅನ್ನು ಸಿದ್ಧಪಡಿಸಿಕೊಳ್ಳುತ್ತಿವೆ.ಆದ್ರೆ ಬಿಸಿಸಿಐ ಮಾತ್ರ ಇದ್ರ ಬಗ್ಗೆ ಅಷ್ಟೊಂದು ಗಮನ ಹರಿಸಿಲ್ಲ.

ಕೇವಲ ದುಡ್ಡು ಮತ್ತು ಪ್ರತಿಷ್ಟೆಗೋಸ್ಕರ ಒದ್ದಾಟ ಮಾಡುತ್ತಿರುವ ಬಿಸಿಸಿಐ ದಣಿಗಳು ಟೀಮ್ ಇಂಡಿಯಾ ಆಟಗಾರರ ಬಗ್ಗೆ ಮಾತ್ರ ತಲೆನೇ ಕೆಡಿಸಿಕೊಂಡಿಲ್ಲ. ಯಾಕಂದ್ರೆ ಬಿಸಿಸಿಐಗೆಆಟಗಾರರ ಹಿತಕ್ಕಿಂತ ದುಡ್ಡೇ ಮುಖ್ಯವಾಗಿದೆ.
ಸನತ್ ರೈ

ಸಚಿನ್‌ ಅವ್ರ 22ನೇ ಅವತಾರ

1989 ನವೆಂಬರ್‌ 15 .. ಮರೆತರೂ ಮರೆಯಲಾಗದ ದಿನ. ಮತ್ತೆ ಮತ್ತೆ ನೆನಪಿಗೆ ಬರುವ ದಿನ.. ಯಾಕಂದ್ರೆ, ಅದು, ಕ್ರಿಕೆಟ್‌ ಯೂನಿವರ್ಸಿಟಿಗೆ ಮುನ್ನುಡಿ ಬರೆದ ದಿನ. ಕರಾಚಿಯಲ್ಲಿ ನಡೆದ ಇಂಡೋ-ಪಾಕ್‌ ಟೆಸ್ಟ್‌ ಪಂದ್ಯದಲ್ಲಿ 16ರ ಹರೆಯದ ಶಾಲಾ ಬಾಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ಪದಾರ್ಪಣೆ ಮಾಡಿದ ದಿನ.
ಹೌದು, ಮುಂದಿನ ದಿನಗಳಲ್ಲಿ ನಡೆದದ್ದು ಇತಿಹಾಸ. ಪಂದ್ಯದಿಂದ ಪಂದ್ಯಕ್ಕೆ ಮಾಗಿದ ಹುಡುಗ, ವಿಶ್ವ ಕ್ರಿಕೆಟ್‌ನ ಚಕ್ರವರ್ತಿಯಾಗಿದ್ದು ವರ್ಣಿಸಲಸದಳ. ಇಂತಹ ಮಹೋನ್ನತ ಸಾಧಕನ ಹೆಸ್ರು ಸಚಿನ್ ರಮೇಶ್‌ ತೆಂಡುಲ್ಕರ್‌.
ಅಂದ ಹಾಗೇ, ಇದು ತಪ್ತ ಮನಸ್ಸಿನ ತಪಸ್ಸಿನ ಫಲ. ಹಾಗಂತ ಇದು ಕಥೆಯಲ್ಲ. ತನ್ನ ಬದುಕು, ಉಸಿರು ಎಲ್ಲವೂ ಕ್ರಿಕೆಟ್‌ ಅಂತ ನಂಬಿಕೊಂಡವನ ಯಶೋಗಾಥೆ
ಕಳೆದ 21 ವರ್ಷಗಳಿಂದ ವಿಶ್ವ ಕ್ರಿಕೆಟನ್ನ ಆಳುತ್ತಿರುವ ಸಚಿನ್‌ ಅವ್ರದ್ದು ಬತ್ತದ ದಾಹ. ವಯಸ್ಸು ಕೇವಲ 37.. ಆದ್ರೂ ಆಟದ ಧಮ್‌ ಕಮ್ಮಿಯಾಗಿಲ್ಲ. ಹಾಗೇ, ಹುಡುಗರನ್ನ ನಾಚಿಸುವಂತಹ ಫಿಟ್‌ನೆಸ್‌.. ಇನ್ನೂ ಕಲಿಯುವ ಹಂಬಲ.. ಅದಕ್ಕಿಂತಲೂ ಹೆಚ್ಚಾಗಿ ಕ್ರಿಕೆಟ್‌ ಮೇಲಿನ ಪ್ರೀತಿ, ಬದ್ಧತೆ, ಏಕಾಗ್ರತೆ .. ಇದು, ಸಚಿನ್‌ ಯಶಸ್ಸಿನ ಹಿಂದಿನ ಮಂತ್ರ. ಹಾಗೇ ತನ್ನಬದುಕಿನಲ್ಲಿ ರೂಢಿಸಿಕೊಂಡು ಬಂದಿರುವ ತತ್ವಸಿದ್ಧಾಂತವೂ ಹೌದು.
ಕಳೆದ ಎರಡು ದಶಕಗಳಿಂದ ಸಚಿನ್ ಆಡಿದ ಮತ್ತು ಆಡುತ್ತಿರುವ ಪರಿ ಎಂಥವರನ್ನ ಬೆರಗುಗೊಳಿಸುತ್ತೆ. ಸಚಿನ್ ಗಳಿಸುವ ಪ್ರತಿಯೊಂದು ರನ್‌ನಲ್ಲೂ ಹೊಸತನವಿರುತ್ತೆ. ಕ್ರಿಕೆಟ್‌ ಕಲಿಯುವ ಚಿಣ್ಣರಿಗೆ ಸಚಿನ್‌ ಪಾಠಶಾಲೆಯಾದ್ರೆ, ಯುವ ಆಟಗಾರರಿಗೆ ಫ್ರೊಫೆ ಸರ್‌. ಅಷ್ಟರ ಮಟ್ಟಿಗೆ ಸಚಿನ್‌ ಕ್ರಿಕೆಟ್‌ನ ಪರಿಪೂರ್ಣ ಕಲಾವಿದರಾಗಿದ್ದಾರೆ.
ಇನ್ನು, ಸಚಿನ್ ಅವ್ರ ಬ್ಯಾಟಿಂಗ್‌ ವೈಖರಿ, ಆಡುವ ತಾಕತ್ತು, ಪಂದ್ಯಕ್ಕೆ ಮುನ್ನ ನಡೆಸುವ ತಯಾರಿ, ಸಹ ಆಟಗಾರರಿಗೆ ನೀಡುವ ಮಾರ್ಗದರ್ಶನ ಹೀಗೆ ಸಚಿನ್ ಅವ್ರ ನಡೆ, ನುಡಿಗಳಿಂದ ಅವ್ರು ಜೀನಿಯಸ್‌ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಬಹುಶಃ ಸಚಿನ್‌ ಬರೆಯದ ದಾಖಲೆಗಳಿಲ್ಲ. ಆಡುವ ಪ್ರತಿ ಪಂದ್ಯವೂ ಒಂದೊಂದು ದಾಖಲೆಗಳ ಅಧ್ಯಾಯವಾಗಿರುತ್ತೆ .ಅದು ಏಕದಿನ ಪಂದ್ಯವೇ ಆಗಿರಲಿ, ಟೆಸ್ಟ್‌ ಪಂದ್ಯವೇ ಆಗಿರಲಿ.. ಅಥವಾ ಚುಟುಕು ಕ್ರಿಕೆಟ್ಟೆ ಆಗಿರಲಿ.. ಅಲ್ಲಿ ಸಚಿನ್ ಇದ್ರೆನೇ ಅಂದ... ಅವ್ರ ಆಟವನ್ನ ನೋಡೋದೆ ಚೆಂದ. ಯಾಕಂದ್ರೆ ಸಚಿನ್ ಅಭಿಮಾನಿಗಳ ಪಾಲಿಗೆ ಯಾವತ್ತಿಗೂ ಕ್ಲಾಸ್‌ ಆಂಡ್‌ ಮಾಸ್‌ ಹೀರೋ.
ಒಟ್ಟಿನಲ್ಲಿ ಕ್ರಿಕೆಟ್‌ ದೇವ್ರು 22ನೇ ಅವತಾರಕ್ಕೆ ಕಾಲೀಡುತ್ತಿದ್ದಾರೆ. ಆದ್ರೆ ಈ ಅವತಾರದಲ್ಲಿ ಸಚಿನ್ ಮುಂದೆ ಸಾಕಷ್ಟು ಸವಾಲುಗಳಿವೆ. ಟೆಸ್ಟ್‌ ಮತ್ತು ಏಕದಿನ ಪಂದ್ಯಗಳಲ್ಲಿ ಅರ್ಧಶತಕಗಳ ಶತಕದ ಸಾಧನೆ, ಆಸ್ಟ್ರೇಲಿಯಾ ನೆಲದಲ್ಲಿ ಸರಣಿ ಗೆಲ್ಲೋದು, 2011ರ ವಿಶ್ವಕಪ್‌ ಅನ್ನು ಭಾರತಾಂಬೆಗೆ ಅರ್ಪಿಸೋದು ಸಚಿನ್‌ ಅವ್ರ ಪ್ರಮುಖ ಮನೋಭಿಲಾಷೆ. ಏನೇ ಆದ್ರೂ ಕ್ರಿಕೆಟ್‌ ದೇವ್ರು ಅಭಿಮಾನಿ ದೇವರುಗಳ ಆಸೆಯನ್ನು ಈಡೇರಿಸುತ್ತಾರಾ ಅನ್ನೋದಕ್ಕೆ ಕಾಲವೇ ಉತ್ತರ ನೀಡಲಿದೆ.
ಸನತ್ ರೈ