Thursday, August 19, 2010

ಕನಸುಗಾರನ ಕನಸು...

ಸಚಿನ್‌ ರಮೇಶ್‌ ತೆಂಡುಲ್ಕರ್‌...ಕನಸುಗಾರ...ಅಂದುಕೊಂಡಿದ್ದನ್ನು ಸಾಧಿಸುವ ಛಲಗಾರ...ಮುಂಬೈನ ಶಿವಾಜಿ ಪಾರ್ಕ್‌ ಅಂಗಣದಲ್ಲಿ ಸುಸ್ತಾಗುವಷ್ಟು ಅಭ್ಯಾಸ ಮಾಡುತ್ತಿದ್ದ ಹುಡುಗ.. ಬಹುಶಃ ಪಕ್ಕದಲ್ಲೇ ನೆಲಯೂರಿದ್ದ ವಿಘ್ನೇಶನೂ ಈ ಹುಡುಗನ ಪರಿಶ್ರಮಕ್ಕೆ ತಥಾಸ್ತು ಅಂದಿದ್ದ. ಗುರು ರಮಕಾಂತ್‌ ಅಚ್ರೆಕರ್‌ ಗರಡಿಯಲ್ಲಿ ಪಳಗಿದ ಈ ಚೊಟುದ್ದ ಹುಡುಗ ಕ್ರಿಕೆಟ್‌ ಜಗತ್ತಿನ ಅನಭಿಷಕ್ತ ದೊರೆಯಾಗಿದ್ದು ಒಂದು ರೋಚಕ ಅಧ್ಯಾಯ...
ಹೌದು, ಮೀಸೆ ಚಿಗುರುವ ಮುನ್ನವೇ ಅಂತಾರಾಷ್ಟ್ರೀಯ ಕ್ರಿಕೆಟಿಗೆ ರಣಕಹಳೆ ಮೊಳಗಿದ ವಾಮನಮೂರ್ತಿ. ಮಾರಕ ಪಾಕ್‌ ಬೌಲರ್‌ಗಳಿಂದ ಮುಖಕ್ಕೆ ಏಟು ಮಾಡ್ಕೊಂಡ್ರೂ ಎದೆಗುಂದದ ವೀರ ಸೇನಾನಿ. . ರಕ್ತದ ಹನಿಗಳು ನೆಲಕ್ಕುರುಳಿದ್ರೂ ಅಂಜದ ಗಂಡು. ಕ್ರಿಕೆಟ್‌ ಆಟವನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸುವ ಹಠವಾದಿ. ತನ್ನ ಮಾಸ್ಟರ್‌ ಬ್ಲಾಸ್ಟರ್ ಆಟದಿಂದ ಅಭಿಮಾನಿಗಳನ್ನ ರಂಜಿಸುವ ಕಲಾಕಾರ. ರನ್‌ಗಳನ್ನ ಗುಡ್ಡೆ ಹಾಕಿದ ದಾಖಲೆವೀರ...
ಆದ್ರೂ , ಸಚಿನ್‌ ದಾಹ ಮಾತ್ರ ನೀಗಿಲ್ಲ. ಅದು ತಪ್ತ ಮನಸ್ಸಿನ ತಪ್ಪಸ್ಸಿನಂತೆ... ಸದಾ ಮಿಡಿಯುತ್ತಿರುವ ತುಮುಲ. ಇಂತಹ ಮನೋಭಾವನೆ ಸಚಿನ್‌ಗಿರಲು ಮಾತ್ರ ಸಾಧ್ಯ. ಯಾಕಂದ್ರೆ ಅಲ್ಲಿ ಮಾತಿಲ್ಲ.. ಬ್ಯಾಟ್‌ ಮೌನವಾಗಿಯೇ ಉತ್ತರ ನೀಡುತ್ತೆ. ಹಾಗೇ, ಅಹಂ ಇಲ್ಲ. ಬದ್ಧತೆ ಇದೆ. ಗಡಿಬಿಡಿ ಇಲ್ಲ.... ಏಕಾಗ್ರತೆ ಇದೆ. ಕ್ರಿಕೆಟ್‌ ಅಂದ್ರೆ ಇಷ್ಟೇನಾ ಅನ್ನೋ ಅಸಡ್ಡೆ ಇಲ್ಲ... ಕಲಿಯುವುದಕ್ಕೆ ಇನ್ನೂ ಇದೆ ಅನ್ನೋ ಪರಿಶ್ರಮವಿದೆ. ಇದು ಜೀನಿಯಸ್‌ ಆಟಗಾರನ ಸ್ಪೆಷಾಲಿಟಿ.
ಕಳೆದ 21 ವರ್ಷಗಳಿಂದ ಸಚಿನ್‌ ಕ್ರಿಕೆಟ್‌ ಜಗತ್ತನ್ನ ಆಳುತ್ತಿದ್ದಾರೆ. ಸುಮಾರು 75ಕ್ಕೂ ಅಧಿಕ ದಾಖಲೆಗಳು ಸದ್ದಿಲ್ಲದೆ ಸಚಿನ್‌ ಹೆಸರಿನಲ್ಲಿ ಅಂಟಿಕೊಂಡಿವೆ. ಅಲ್ಲದೆ, ಐದು ವಿಶ್ವಕಪ್‌ ಆಡಿದ ಹೆಗ್ಗಳಿಕೆಯೂ ತೆಂಡುಲ್ಕರ್‌ಗಿದೆ. ಈ ಬಗ್ಗೆ ಸಚಿನ್‌ಗೂ ಹೆಮ್ಮೆ ಇದೆ. ಅದಕ್ಕಾಗಿ ಸಚಿನ್‌ ಅದೃಷ್ಟವಂತ ಅಂತಲೂ ಹೇಳಿಕೊಳ್ಳುತ್ತಾರೆ. ಹಾಗಂತ ಸಾಧನೆ, ದಾಖಲೆ, ರನ್‌ಗಳು ಸುಮ್ಮನೆ ಹರಿದುಬಂದಿಲ್ಲ. ಪ್ರತಿಯೊಂದರ ಹಿಂದೆಯೂ ಶ್ರಮವಿದೆ. ಜತೆಗೆ ಇದಕ್ಕೆಲ್ಲಾ ಕಾರಣ ಸರ್ವಶಕ್ತನಾದ ದೇವರು ಅನ್ನಲು ಕ್ರಿಕೆಟ್‌ ದೇವರು ಮರೆಯುವುದಿಲ್ಲ.
ಇಷ್ಟೆಲ್ಲಾ ಆದ್ರೂ ಸಚಿನ್‌ ಮನಸ್ಸು ಮಾತ್ರ ಕೊರಗ್ತಾನೇ ಇದೆ. ತನ್ನ ಕ್ರಿಕೆಟ್‌ ಬದುಕಿನಲ್ಲಿ ವಿಶ್ವಕಪ್‌ ಗೆಲ್ಲಲು ಆಗಿಲ್ಲ ಅನ್ನೋ ನೋವು ಅವ್ರನ್ನ ಕಾಡ್ತಾ ಇದೆ. ಆ ನೋವನ್ನ ಮರೆ ಮಾಚಲು ಸಚಿನ್‌ ಈಗೀನಿಂದಲೇ ಸಿದ್ಧತೆ ಮಾಡಿಕೊಳ್ತಾ ಇದ್ದಾರೆ. ತವರಿನಲ್ಲಿ ಅದೂ ಕೂಡ ಮುಂಬೈನಲ್ಲಿ 2011ರ ವಿಶ್ವಕಪ್‌ ಗೆಲ್ಲುವುದು ಈ ಕನಸುಗಾರನ ಕನಸು. ಒಂದು ವೇಳೆ ಆ ಕನಸು ನನಸಾದ್ರೆ ಕ್ರಿಕೆಟ್‌ ದೇವ್ರ ವರ್ಣರಂಜಿತ ಬದುಕಿಗೆ ಸಾರ್ಥಕತೆಯ ಅಭಿಷೇಕವಾಗುತ್ತೆ...
ಸನತ್ ರೈ

ಥ್ಯಾಂಕ್‌ ಯೂ ಮುರಳಿ...

ಇದು ಅರ್ಥಪೂರ್ಣ ವಿದಾಯ… ಬಹುಶಃ ಇಂತಹ ಭಾಗ್ಯ ಎಲ್ಲಾ ಕ್ರಿಕೆಟಿಗರಿಗೆ ಸಿಗಲ್ಲ. 18 ವರ್ಷಗಳ ವರ್ಣ ರಂಜಿತ ಕ್ರಿಕೆಟ್‌ ಬದುಕಿಗೆ ಒಂಚೂರು ದಕ್ಕೆಯಾಗಂತೆ ಮುರಳಿ ಗುಡ್‌ ಬೈ ಹೇಳಿದ್ರು. ಹೌದು, ಗಾಲೆ ಟೆಸ್ಟ್‌ನಲ್ಲಿ ಮುರಳಿ ಅಂದುಕೊಂಡಿದ್ದನ್ನ ಸಾಧಿಸಿದ್ರು. ಕಟ್ಟ ಕಡೆಯ ಪಂದ್ಯದಲ್ಲಿ ಕಟ್ಟ ಕಡೆಯ ವಿಕೆಟ್‌ ಪಡೆದು ತನ್ನ ಮ್ಯಾಜಿಕ್‌ ಕೈಗಳಿಗೆ ವಿಶ್ರಾಂತಿ ನೀಡಿದ್ರು.
133ನೇ ಟೆಸ್ಟ್‌ನಲ್ಲಿ ಭಾರತದ ವಿರುದ್ಧ ಎಂಟು ವಿಕೆಟ್‌ಗಳನ್ನ ಕಬಳಿಸಿದ ಮುರಳಿ ತನ್ನ ವಿಕೆಟ್‌ ಬೇಟೆಯನ್ನು ಭರ್ತಿ 800 ಕ್ಕೇರಿಸಿಕೊಂಡ್ರು. ಮತ್ತೊಂದೆಡೆ, ಈ ಮಹನ್ನೊನ್ನತ ಕ್ರಿಕೆಟಿಗನ ಕೊನೆಯ ಪಂದ್ಯವನ್ನ ಸಂಗಕ್ಕರ ಹುಡುಗರು ಅವಿಸ್ಮರಣೀಯವಾಗಿಸಿದ್ರು. ನಂ.1 ತಂಡದ ವಿರುದ್ಧ ಗೆಲುವು ಸಾಧಿಸಿ ತನ್ನ ಹಿರಿಯಣ್ಣನಿಗೆ ಸಂಗಕ್ಕರ ಹುಡುಗರು ಅರ್ಥಪೂರ್ಣ ವಿದಾಯವನ್ನೇ ಹೇಳಿದ್ರು.
ಅಂದ ಹಾಗೇ ಈ ಸ್ಮೈಲಿಂಗ್‌ ಕಿಲ್ಲರ್‌ನ ಪ್ರತಿಯೊಂದು ಎಸೆತವೂ ಭಿನ್ನ ವಿಭಿನ್ನ. ಬ್ಯಾಟ್ಸ್‌ ಮನ್‌ ಸ್ವಲ್ಪ ಯಾಮಾರಿದ್ರೂ ಸಾಕು ಅಪಾಯ ಕಟ್ಟಿಟ್ಟ ಬುತ್ತಿ. ಮುರಳಿಯ ಮ್ಯಾಜಿಕ್‌ ಕೈಯಿಂದ ಗಾಳಿಯಲ್ಲಿ ಬುಗುರಿಯಂತೆ ತೇಲಿ ಬರುವ ಚೆಂಡನ್ನ ಬ್ಯಾಟ್ಸ್‌ ಮನ್‌ ಅರ್ಥಮಾಡಿಕೊಳ್ಳದಿದ್ರೆ ವಿಕೆಟ್‌ ಕಳೆದುಕೊಳ್ಳುವುದು ಗ್ಯಾರೆಂಟಿ.
ಈಗಾಗಲೇ ಟೆಸ್ಟ್‌ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್‌ ಪಡೆದಿರುವ ಮುರಳಿಯ ದಾಖಲೆ ಮುಂದೊಂದು ದಿನ ಅಳಿಸಿ ಹೋಗುತ್ತೆ ಅನ್ನೋದು ಕನಸಿನ ಮಾತೇ ಸರಿ. ಯಾಕಂದ್ರೆ ಮುರಳಿ ಯಾರು ಏರದಷ್ಟು ದೊಡ್ಡ ಬೆಟ್ಟವನ್ನ ಹತ್ತಿದ್ದಾರೆ. ಆದ್ರೆ, ಮುರಳಿ ಇಷ್ಟೆಲ್ಲಾ ಸಾಧನೆ ಮಾಡ್ತಿನಿ ಅಂತ ಕನಸ್ಸಿನಲ್ಲೂ ಅಂದುಕೊಂಡಿರಲಿಲ್ಲ.
ಇನ್ನು, ಮುರಳಿ ಭಾವುಕ ಜೀವಿ. ವಿದಾಯದ ನೋವು ಅವ್ರಲ್ಲಿದ್ರೂ ಅದನ್ನ ತೋರಿಸಿಕೊಳ್ತಿಲ್ಲ. ನಗು ನಗುತ್ತಲೇ ಮಾತನಾಡುವುದು ಮುರಳಿಯ ಸ್ವಭಾವ. ಬಹುಶಃ ಇದೇ ನಗು ಅವ್ರ ಯಶಸ್ವಿನ ಗುಟ್ಟು ಕೂಡ ಹೌದು. ಕ್ರಿಕೆಟ್‌ ಬದುಕಿನಲ್ಲಿ ಅದೆಷ್ಟೋ ಯಶಸ್ಸು ಸಾಧಿಸಿದ್ರೂ, ವಿವಾದ, ಅವಮಾನ ಮುರಳಿಯ ಬದುಕನ್ನ ಸಾಕಷ್ಟು ಘಾಸಿಗೊಳಿಸಿದೆ. ಆದ್ರೂ ನಗು ನಗುತ್ತಲೇ ಎಲ್ಲದಕ್ಕೂಉತ್ತರ ಕೊಟ್ರು ಮುರಳೀಧರನ್‌. ಕೊನೆಗೆ ಟೀಕೆ, ಅವಮಾನ ಮಾಡಿದವ್ರೆ ಮುರಳೀಯ ಸಾಧನೆಗೆ ದಂಗಾಬಿಟ್ರು.
ಇನ್ನು, ಮುರಳಿಯ ಸಾಧನೆಯ ಬಗ್ಗೆ ಸಿಂಹಳಿಯರಿಗೆ ಹೆಮ್ಮೆ ಇದೆ. ಅದಕ್ಕೆ ಕೊನೆಯ ಪಂದ್ಯವೇ ಸಾಕ್ಷಿ. ಗಾಲೆ ಮೈದಾನದಲ್ಲಿ ಎಲ್ಲೂ ನೋಡಿದ್ರೂ ಅಲ್ಲಿ ಬರೀ ಮುರಳಿಯ ಕಟೌಟ್‌ಗಳು ರಾರಾಜಿಸ್ತಾ ಇದ್ದವು.
ಮ್ಯಾಜಿಶಿಯನ್‌ ಮುರಳಿ, ವನ್‌ ಆಂಡ್‌ ಒನ್ಲಿ ಮುರಳಿ, ಗ್ರೇಟೆಸ್ಟ್‌ ಬೌಲರ್‌.. ಸ್ಪಿನ್‌ ಜಾದೂಗಾರ... ಥ್ಯಾಂಕ್‌ ಯು ಮುರಳಿ, ಗುಡ್‌ ಬೈ ಮುರಳಿ ಹೀಗೆ ಅಂಗಣದ ಮೂಲೆ ಮೂಲೆಯಲ್ಲೂ ಬರೀ ಮುರಳಿಯದ್ದೇ ಧ್ಯಾನ.
ಇಷ್ಟೆಲ್ಲಾ ಯಶಸ್ಸು, ಜನಪ್ರಿಯತೆ, ಸಾಧನೆ ಮಾಡಿದ್ರೂ ಮುರಳಿಗೆ ಅಹಂವಿಲ್ಲ. ಎಲ್ಲರ ಜತೆ ನಗುನಗುತ್ತಲೇ ಬೆರೆಯುತ್ತಾರೆ. ಡ್ರೇಸಿಂಗ್‌ ರೂಮ್‌ನಲ್ಲಂತೂ ಕಾಮಿಡಿ ಮಾಡ್ಕೊಂಡು ಎಂಜಾಯ್‌ ಮಾಡ್ತಾರೆ. ಇಂತಹ ಮುರಳಿ ಈಗ ಲಂಕಾ ಡ್ರೆಸಿಂಗ್‌ ರೂಮ್‌ನಿಂದ ಹೊರಬಂದಿದ್ದಾರೆ.
ಇನ್ನು, ಮುರಳಿ ದೇವ್ರ ಮೇಲೆ ಅಪಾರ ನಂಬಿಕೆಯನ್ನಿಟ್ಟುಕೊಂಡಿದ್ದಾರೆ. ಮುರಳಿಗೆ ದೇವ್ರು ಎಲ್ಲವನ್ನೂ ಕೊಟ್ಟಿದ್ದಾನಂತೆ. ಆದ್ದರಿಂದ ಕ್ರಿಕೆಟ್‌ ಬದುಕಿಗೆ ವಿದಾಯ ಹೇಳುತ್ತಿರುವುದು ಸ್ವಲ್ಪನೂ ಬೇಜಾರಿಲ್ಲ. ಯಾಕಂದ್ರೆ ಅವ್ರು ಏನು ಸಾಧಿಸಬೇಕು ಅದನ್ನು ಸಾಧಿಸಿದ್ದಾರೆ..
ಮತ್ತೊಂದೆಡೆ, ಅಭಿಮಾನಿಗಳು ಮುರಳಿ ವಿದಾಯಹೇಳಬೇಕು ಅಂತ ಹೇಳ್ತಾ ಇಲ್ಲ. ಮುರಳಿ ಇನ್ನೂ ಆಡಬೇಕು ಅಂತಿದ್ದಾರೆ. ಆದ್ರೂ ಮುರಳಿ ಟೆಸ್ಟ್‌ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ್ದಾರೆ. ಥ್ಯಾಂಕ್‌ ಯೂ ಮುರಳಿ... ಯು ಆರ್‌ ಜೀನಿಯಸ್‌....
ಸನತ್‌ ರೈ