Sunday, December 26, 2010

ಮರ್ಕಟ ಮನಸ್ಸು...!

ಕೆಲವೊಂದು ಸಲ ನಂಬಿಕೆ- ವಿಶ್ವಾಸಕ್ಕೆ ಅರ್ಥನೇ ಇರೋಲ್ಲ... ನಮ್ಮವರು ಅಂತ ಅಂದುಕೊಳ್ಳುವುದು ಭ್ರಮೆಯಾಗಿರುತ್ತೆ. ಅದ್ರಲ್ಲೂ ಆಪ್ತ ಸ್ನೇಹಿತರು ಮನಸ್ಸಿಗೆ ಚೂರು ನೋವು ಮಾಡಿದ್ರೂ ಆಗುವ ವೇದನೆ ಅಷ್ಟಿಷ್ಟಲ್ಲ. ಸ್ನೇಹಿತರು ಅಂದ ಮೇಲೆ ಕೋಳಿ ಜಗಳ ಸಹಜ. ಆದ್ರೆ ಅದು ಪದೇ ಪದೇ ರಿಪೀಟ್‌ ಆದಾಗ ಅಲ್ಲಿ ಮಾತು ಇರುವುದಿಲ್ಲ.. ಬರೀ ಮೌನವೇ ಉತ್ತರವಾಗಿರುತ್ತೆ. ಆಗ ಅಲ್ಲಿ ನೆನಪಾಗುವುದು ಫ್ಲಾಷ್‌ ಬ್ಯಾಕ್‌ಗಳು.
ಹೌದು, ಮನಸ್ಸಿಗೆ ತುಂಬಾ ಹತ್ತಿರವಾದವ್ರು ಸಡನ್‌ ಆಗಿ ದೂರವಾದಾಗ ಬೇಜಾರು ಆಗೋದು ಸಹಜ... ಸ್ನೇಹ, ಪ್ರೀತಿ, ನಂಬಿಕೆಗಳಿಗೆ ಬೆಲೆನೇ ಇಲ್ಲ ಅಂತ ಭಾಸವಾಗುತ್ತೆ. ಆಗ ಬರುತ್ತೆ ಸಿಟ್ಟು... ಮತ್ಸರ ..ದ್ವೇಷದ ಭಾವನೆಗಳು.. ಆಗ ಮನಸ್ಸು ಕಂಟ್ರೋಲ್‌ನಲ್ಲಿರುವುದಿಲ್ಲ. ಅಲೆಯಂತೆ ಮೂಡುವ ಚಿತ್ರ ವಿಚಿತ್ರ ಭಾವನೆಗಳು ಮನಸ್ಸನ್ನ ಮತ್ತಷ್ಟು ಘಾಸಿಗೊಳಿಸುತ್ತವೆ.
ಅಷ್ಟಕ್ಕೂ ನಾನ್ಯಾಕೆ ಇನ್ನೊಬ್ಬರನ್ನ ಅಷ್ಟೊಂದು ಹಚ್ಚಿಕೊಳ್ಳಬೇಕು... ಅವ್ರ ಜತೆ ಯಾಕೆ ಆತ್ಮೀಯತೆ.. ಸಲುಗೆಯಿಂದಿರ ಬೇಕು..ನನಗೂ ಅವ್ರಿಗೂ ಏನು ಸಂಬಂಧ.. ಅವ್ರಿಂದ ನನಗೆ ಏನು ಆಗಬೇಕು.. ನನ್ನಿಂದ ಅವ್ರಿಗೆ ಏನು ಆಗಬೇಕು...ಕೊನೆಗೆ ನಾನ್ಯಾರು ಹೀಗೆ ನಾನಾ ರೀತಿಯ ಪ್ರಶ್ನೆಗಳು ಮೂಡುತ್ತವೆ. ಆದ್ರೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಮಾತ್ರ ಬರೀ ಶೂನ್ಯ.
ಯಾಕಂದ್ರೆ ಇದು ಕೇವಲ ನಮ್ಮ ಭ್ರಮೆಯಷ್ಟೇ... ನಮ್ಮನ್ನು ನಾವೇ ಕಲ್ಪಿಸಿಕೊಳ್ಳುವುದರಿಂದ ಮನಸ್ಸು ಕೂಡ ಚಂಚಲವಾಗುತ್ತೆ. ಹಾಗಂತ ಎಲ್ಲಾ ಘಟನೆಗಳು ಹಿಂಗೇ ಇರಬೇಕು ಅಂತ ಏನಿಲ್ಲ. ಅದರಲ್ಲೂ ನಮ್ಮನ್ನು ತುಂಬಾ ಅರ್ಥ ಮಾಡ್ಕೊಂಡವ್ರು.. ತುಂಬಾನೇ ಸನೀಹದಲ್ಲಿರುವವರ ಮೇಲೆ ನಾವು ತುಂಬಾನೇ ನಿರೀಕ್ಷೆಗಳನ್ನಿಟ್ಟುಕೊಳ್ಳುತ್ತೇವೆ. ಆದ್ರೆ ಆ ಭಾವನೆಗಳು ಅವ್ರಲ್ಲಿ ಇಲ್ಲ ಅಂತ ನಮ್ಮ ಮನಸ್ಸಿಗೆ ಗೊತ್ತಾದಾಗ ನಮ್ಮ ನಿರೀಕ್ಷೆಗಳು ಹುಸಿಯಾಗುತ್ತವೆ. ನಂಬಿಕೆ, ವಿಶ್ವಾಸ, ಪ್ರೀತಿ ಎಲ್ಲವೂ ವ್ಯರ್ಥ ಅಂತ ಅನ್ಸುತ್ತೆ. ವರ್ಷಗಳ ಒಡನಾಟಕ್ಕೆ ಅರ್ಥವಿಲ್ಲ.. ನೋವು- ನಲಿವುಗಳನ್ನ ಹಂಚಿಕೊಂಡ ಕ್ಷಣಗಳು ಬರೀ ಪ್ರಹಸನ ಅಂತ ಭಾಸವಾಗುತ್ತೆ.
ಬಹುಶಃ ಇದಕ್ಕೆ ಪೊಸಸಿವ್‌ನೆಸ್‌ ಕೂಡ ಕಾರಣವಾಗಿರಬಹುದು. ನಮ್ಮ ಸಂಬಂಧಗಳಿಗೆ ಚ್ಯುತಿಯಾಗುತ್ತೆ ಅನ್ನೋ ಭಯ...ನಮಗಿಂತ ಒಳ್ಳೆಯ ಹಿತೈಸಿಗಳು, ಸ್ನೇಹಿತರು ಸಿಗ್ತಾರೆ.. ಅವ್ರ ಜತೆ ಚೆನ್ನಾಗಿರುತ್ತಾರೆ ಅನ್ನೋ ಮತ್ಸರವಿರುತ್ತೆ. ಇದು ಸ್ವಾರ್ಥವಾದ್ರೂ, ಎಲ್ಲೋ ಒಂದು ಕಡೆ ನಮ್ಮತನವನ್ನ ಕಳೆದುಕೊಂಡ ಆತಂಕವಿರುತ್ತೆ. ಆಗ ಯಾರ ಸಹವಾಸನೂ ಬೇಡ.. ಅನ್ನೋ ಕೊರಗಿನಲ್ಲಿ ಒಂಟಿತನದ ಮೊರೆ ಹೋಗುತ್ತೇವೆ. ಮನಸ್ಸು ಮರ್ಕಟದಂತೆ ಒದ್ದಾಡುತ್ತಾ ಇರುತ್ತೆ.. ನನ್ನವರು ಯಾರು ಇಲ್ಲ.. ಯಾರಿಗೂ ಯಾರು ಇಲ್ಲ ಅಂತ ಭಾಸವಾಗುತ್ತೆ...
ಸನತ್ ರೈ

Saturday, December 25, 2010

ಗಾಡ್‌ ಆಫ್‌ ಕ್ರಿಕೆಟ್‌

ಅದು 22 ವರ್ಷಗಳ ಸುದೀರ್ಘ ಪಯಣ... ಸುಮಾರು 32 ವರ್ಷಗಳಿಂದ ಕ್ರಿಕೆಟ್ಟೇ ತನ್ನ ಉಸಿರು ಅಂತ ಅಂದುಕೊಂಡವನ ಯಶೋಗಾಥೆ ... ಬರೆದ ದಾಖಲೆಗಳಿಗೆ... ದಾಖಲಿಸಿದ ರನ್‌ಗಳಿಗೆ... ಸಿಡಿಸಿದ ಶತಕಗಳಿಗೆ ಲೆಕ್ಕವಿದ್ರೂ ಸುರಿದ ಬೆವರಿನ ಹನಿಗಳಿಗೆ ಮಾತ್ರ ಲೆಕ್ಕವಿಲ್ಲ... ಯಾಕಂದ್ರೆ ಅಲ್ಲಿ ಸಾಧಿಸಬೇಕು ಅನ್ನೋ ಕನಸುಗಾರನ ಹಠಮಾರಿತನವಿದೆ.
ಹೌದು, ಈ ಸೂಪರ್‌ ಮ್ಯಾನ್‌ನ ವರ್ಣರಂಜಿತ ಕ್ರಿಕೆಟ್‌ ಬದುಕೇ ಒಂದು ಸುಂದರ ಕಾವ್ಯ. ಎಲ್ಲಿಯೂ ಕಪ್ಪು ಚುಕ್ಕೆ ಇಲ್ಲ. ಎಲ್ಲವೂ ಫರ್ಫೆಕ್ಟ್‌...
ಮುಂಬೈನ ಶಿವಾಜಿ ಪಾರ್ಕ್‌ ಅಂಗಣದಲ್ಲಿ ಆಟವಾಡುತ್ತಾ ಬೆಳೆದ ಹುಡುಗ ಇಂದು ಕಿಂಗ್‌ ಆಫ್‌ ಕ್ರಿಕೆಟ್‌ .... ಅಭಿಮಾನಿ ದೇವ್ರುಗಳು ಪೂಜಿಸಿ ಆರಾಧಿಸುವ ಗಾಡ್‌ ಆಫ್‌ ಕ್ರಿಕೆಟ್‌.. ...ಕ್ರಿಕೆಟ್‌ ಧರ್ಮವಾಗಿರುವ ಭಾರತದಲ್ಲಿ ಸಚಿನ್ ತೆಂಡುಲ್ಕರ್‌ ಸಂತನೂ ಹೌದು. 22 ಯಾರ್ಡ್‌ನ ಆಟದ ಮೋಡಿಗಾರನಿಗೆ ಬೆಂಕಿಯಂತೆ ಉಗುಳುವ ಎಸೆತವೂ ಒಂದೇ.. .. ಬುಗುರಿಯಂತೆ ತೇಲಿ ಬರುವ ಮ್ಯಾಜಿಕ್‌ ಎಸೆತವೂ ಒಂದೇ.. .. ಎಲ್ಲದಕ್ಕೂ ಸಚಿನ್ ಅವ್ರ ಮಾಂತ್ರಿಕ ಬ್ಯಾಟ್‌ ನಲ್ಲಿ ಉತ್ತರ ಇರುತ್ತೆ .
ಜೀನಿಯಸ್‌ ಆಟಗಾರನ ಆಟಕ್ಕೆ ಮನ ಸೋಲದವ್ರು ಯಾರು ಇಲ್ಲ... ತೆಂಡುಲ್ಕರ್‌ ಕ್ರೀಸ್‌ಗಿಳಿದ್ರೆ ಸಾಕು ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ.. ದಾಖಲಿಸುವ ಪ್ರತಿ ರನ್‌ಗೂ ಅಭಿಮಾನದ ಕರಡಾತನವಿರುತ್ತೆ. ಇನ್ನೂ ಸಚಿನ್‌ ಬ್ಯಾಟ್‌ನಿಂದ ಸಿಡಿದ ಚೆಂಡು ಬುಲೆಟ್‌ನಂತೆ ಬೌಂಡ್ರಿ ಗೆರೆ ದಾಟುವುದನ್ನ ನೋಡುವುದೇ ಕಣ್ಣಿಗೆ ಹಬ್ಬ. ಅಷ್ಟೇ ಯಾಕೆ ವಾಮನಮೂರ್ತಿ ಬಾರಿಸುವ ಸಿಕ್ಸರ್‌ ಕೂಡ ಅಷ್ಟೇ ರೋಮಾಂಚನಗೊಳಿಸುತ್ತೆ. ಅಂತಹ ಅದ್ಭುತ ಶಕ್ತಿ ಸಚಿನ್‌ ಬ್ಯಾಟಿಂಗ್‌ನಲ್ಲಿದೆ.
ನಿಜಕ್ಕೂ ಕೋಟಿ ಕೋಟಿ ಭಾರತೀಯರ ಮನ ಸಚಿನ್‌ಗಾಗಿ ಮಿಡಿಯುತ್ತಿದೆ. ಪ್ರತಿ ಪಂದ್ಯದಲ್ಲೂ ಸಚಿನ್‌ ಶತಕ ದಾಖಲಿಸಬೇಕು ಅನ್ನೋ ಹಂಬಲವಿರುತ್ತೆ.. ಹೆಲ್ಮೆಟ್‌ ತೆಗೆದು, ಆಕಾಶವನ್ನು ದಿಟ್ಟಿಸಿ ನೋಡಿದ ಬಳಿಕ ಅಭಿಮಾನಿಗಳತ್ತ ಬ್ಯಾಟ್‌ ಬೀಸುವ ಆ ಮಹೋನ್ನತ ಕ್ಷಣಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ.
ಅದು ಸಚಿನ್‌ಗೂ ಗೊತ್ತು. ಆದ್ರೆ ಅದು ಎಲ್ಲ ಪಂದ್ಯಗಳಲ್ಲಿ ಆಗುವುದಿಲ್ಲ. ಆದ್ರೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ಐವತ್ತು ಬಾರಿ ಸಚಿನ್‌ ಅಭಿಮಾನಿಗಳ ಮನವನ್ನ ತಣಿಸಿರುವುದು ಮಾತ್ರ ನಿಜಕ್ಕೂ ಗ್ರೇಟ್‌.
ಅಷ್ಟಕ್ಕೂ ಸಚಿನ್‌ ಇನ್ನೂ ಕಲಿಯುವ ಮತ್ತು ಕಲಿಯುತ್ತಿರುವ ಕ್ರಿಕೆಟಿಗ. ಪಂದ್ಯದಿಂದ ಪಂದ್ಯಕ್ಕೆ ಪಕ್ವಗೊಳ್ಳುತ್ತಿರುವ ಆಟಗಾರ. ಯಶಸ್ಸಿನ ಉತ್ತುಂಗದಲ್ಲಿದ್ರೂ ಮಗುವಿನಂತಹ ಮುಗ್ದತೆ ಅವ್ರ ಮುಖದಲ್ಲಿ ಕಾಣಬಹುದು. ಎಷ್ಟೇ ಟೀಕೆ ಬಂದ್ರೂ ಮೌನವಾಗಿಯೇ ಉತ್ತರ ನೀಡುವ ಸೈಲೆಂಟ್‌ ಕಿಲ್ಲರ್‌. ಏನೇ ಆದ್ರೂ, ಸಚಿನ್‌ ತೆಂಡುಲ್ಕರ್‌ ಅವ್ರದ್ದು ಬತ್ತದ ದಾಹ... ಕ್ರಿಕೆಟ್‌ ಜಗತ್ತಿನ ಅನರ್ಘ್ಯ ರತ್ನಕ್ಕೆ ಸಲಾಂ.
ಸನತ್‌ ರೈ

Thursday, December 2, 2010

ಇದು ಕಥೆಯಲ್ಲ... ರಾಜ್ಯ ಕ್ರೀಡಾರಂಗದ ವ್ಯಥೆ

ಅಯ್ಯೋ ದೇವ್ರೆ.. ಇದು ಕಥೆಯಲ್ಲ.. ವ್ಯಥೆ.. ನಮ್ಮ ರಾಜ್ಯ ಕ್ರೀಡಾಪಟುಗಳ ವೇದನೆ. ಆದ್ರೆ, ಡಿ ನೋಟಿಫಿಕೇಷನ್‌, ಕೆಐಎಡಿಬಿ.. ಗಣಿ ಧೂಳ್‌.. ಆ ಡೀಲ್‌, ಈ ಡೀಲ್ ಅಂತ ನೂರಾರು ಸೈಟ್‌ ಗಳನ್ನ ನುಂಗಿ ಹಾಕಿರುವ ನಮ್ಮ ರಾಜಕಾರಣಿಗಳಿಗೆ ನಮ್‌ ಕ್ರೀಡಾ ಪಟುಗಳ ನೋವು ಹೆಂಗೆ ಅರ್ಥವಾಗಬೇಕು.
ಅಷ್ಟಕ್ಕೂ ಇದು ಏಷ್ಯನ್‌ ಕಂಚಿನ ವಿಜೇತೆ ಪ್ರಮೀಳಾ ಅಯ್ಯಪ್ಪ ಒಬ್ರ ನೋವಿನ ಕೂಗಲ್ಲ. ಇವ್ರೊಂದಿಗೆ ಸಾಕಷ್ಟು ರಾಜ್ಯದ ಕ್ರೀಡಾಪಟುಗಳಿದ್ದಾರೆ. ಹೆಸರಿಗೆ ಕ್ರೀಡಾ ಹಾಸ್ಟೆಲ್‌ಗಳಿದ್ರೂ ಅಲ್ಲಿ ಮಾರ್ಗದರ್ಶನದ ಕೊರತೆ ಇದೆ. ಸೂಕ್ತ ತರಬೇತುದಾರರಿಲ್ಲದೆ ಅರಳುವ ಪ್ರತಿಭೆಗಳು ಕಮರಿ ಹೋಗ್ತಾ ಇವೆ. ಅಷ್ಟೊಂದು ಶೋಚನೀಯ ಸ್ಥಿತಿಯಲ್ಲಿದೆ ಕರ್ನಾಟಕದ ಕ್ರೀಡಾರಂಗ.
ಕ್ರೀಡಾ ಅಭಿವೃದ್ದಿಗೆ ಕ್ರೀಡಾ ಇಲಾಖೆ ಇದ್ರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ. ಗೆದ್ದಾಗ ಮಾತ್ರ ಬೆನ್ನು ತಟ್ಟುವ ರಾಜ್ಯ ಒಲಿಂಪಿಕ್‌ ಸಂಸ್ಥೆ ಏನೂ ಮಾಡ್ತಿದೆ ಎಂಬುದು ಅಧಿಕಾರದ ದಾಹ ಹಿಡಿದವರಿಗೆ ಗೊತ್ತು. ಅಷ್ಟೇ ಅಲ್ಲ, ರಾಜ್ಯದ ಪ್ರತಿ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಪ್ರತಿಯೊಂದು ವಿಭಾಗದ ಕ್ರೀಡಾಸಂಸ್ಥೆಗಳಿವೆ. ಆದ್ರೆ ಆ ಸಂಸ್ಥೆಗಳು ಯಾವ ರೀತಿ ಕಾರ್ಯನಿರ್ವಹಿಸುತ್ತಿವೆ ಎಂಬುದು ಆ ಪರಮತ್ಮಾನಿಗೆ ಮಾತ್ರ ಗೊತ್ತು.
ಇನ್ನು, ಬೇರೆ ರಾಜ್ಯಕ್ಕೆ ಹೋಲಿಸಿದ್ರೆ ಕರ್ನಾಟಕದಲ್ಲಿ ಕ್ರೀಡಾರಂಗಕ್ಕೆ ಸೂಕ್ತ ಪ್ರೋತ್ಸಾಹವೇ ಸಿಗ್ತಾ ಇಲ್ಲ. ವರ್ಷಕ್ಕೊಂದು ರಾಜ್ಯ ಪ್ರಶಸ್ತಿ, ಏಕಲವ್ಯ ಪ್ರಶಸ್ತಿ, ರಾಜ್ಯ ಒಲಿಂಪಿಕ್‌ ಪ್ರಶಸ್ತಿ ಬಿಟ್ರೆ ಕ್ರೀಡಾಪಟುಗಳ ಸಾಧನೆಯನ್ನು ಕೇಳುವವರೇ ಇಲ್ಲ. ಅಷ್ಟಕ್ಕೂ ನಮ್ಮ ರಾಜ್ಯದಲ್ಲಿ ಕ್ರೀಡಾ ಪಾಲಿಸಿಯನ್ನ ಜಾರಿಗೊಳಿಸಬೇಕು ಎಂಬ ಹಲವು ವರ್ಷಗಳ ಕೂಗು ಇನ್ನೂ ಪ್ರತಿ ಧ್ವನಿಸುತ್ತಲೇಇದೆ.
ಈಗಾಗಲೇ ಹರಿಯಾಣ, ಜಾರ್ಕಂಡ್‌, ಆಂಧ್ರ ಪ್ರದೇಶ, ಗುಜರಾತ್‌, ತಮಿಳುನಾಡು, ಕೇರಳ ಪಂಜಾಬ್‌ ರಾಜ್ಯಗಳಲ್ಲಿ ಕ್ರೀಡಾಪಟುಗಳಿಗೆ ರಾಜ ಮರ್ಯಾದೆ ಇದೆ. ಜತೆಗೆ ಕ್ರೀಡಾ ಪ್ರತಿಭೆಗಳನ್ನ ಗುರುತಿಸಲು ವಿಶೇಷ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿವೆ. ಮತ್ತೊಂದೆಡೆ, ಪದಕ ಗೆದ್ದ ಕ್ರೀಡಾಪಟುಗಳಿಗೆ ಬಂಪರ್‌ನಗದು ಬಹುಮಾನ ನೀಡಿ ಪ್ರೋತ್ಸಾಹ ನೀಡ್ತಾ ಇದೆ.
ಆದ್ರೆ ನಮ್ಮಲ್ಲಿ ಕೇವಲ ಆಶ್ವಾಸನೆಗಳು ಮಾತ್ರ ಕೇಳಿಬರ್ತಿವೆ. ಇಲ್ಲಿ ನಿಜವಾದ ಸಾಧಕರಿಗೆ ಬೆಲೆ ಇಲ್ಲ. ಕಷ್ಟ ಪಟ್ಟು ಯಶ ಸಾಧಿಸಿದವರ ಬದುಕು ಆತಂತ್ರ ಸ್ಥಿತಿಯಲ್ಲಿದೆ. ರೆಸಾರ್ಟ್ನಲ್ಲಿ ಕೂತ್ಕೊಂಡು ರಾಜಕೀಯ ಲೆಕ್ಕಾಚಾರ ಹಾಕುತ್ತಿರುವ ಜನ ನಾಯಕರು ಕ್ರೀಡಾಭಿವೃದ್ದಿಯತ್ತ ಸ್ವಲ್ಪ ಯೋಚನೆ ಮಾಡಿದ್ರೆ ಕರುನಾಡಿಗೆ ಇನ್ನಷ್ಟು ಪದಕ ಗೆಲ್ಲುವ ಕ್ರೀಡಾಪಟುಗಳ ಉದಯವಾಗಬಹುದು.
ಸನತ್‌ ರೈ

ಕರಾವಳಿಯ ಚಿನ್ನದ ಚಿಗರೆ

ಕರಾವಳಿ ಹುಡುಗಿಯ ಮನೆಯಲ್ಲಿ ಹಬ್ಬದ ಸಂಭ್ಗ್ರಮ....ವರ್ಷದ ಬಳಿಕ ತವರಿಗೆ ಬಂದ ಖುಷಿ... ಕಾಮನ್‌ವೆಲ್ತ್‌, ಏಷ್ಯನ್‌ ಗೇಮ್ಸ್‌ ನಲ್ಲಿ ಚಿನ್ನದ ನಗೆ ಬೀರಿ ಜಗತ್ತಿನಾದ್ಯಂತ ಮನೆಮಾತಾದ ಅಶ್ವಿನಿ ಅಕ್ಕುಂಜೆಯನ್ನು ಇಡೀ ಊರಿಗೆ ಊರೇ ಆರತಿ ಎತ್ತಿ ಬರಮಾಡಿಕೊಂಡಿತ್ತು.
ತನ್ನ ಅಮೋಘ ಸಾಧನೆಯೊಂದಿಗೆ ಅಶ್ವಿನಿ ಅಕ್ಕುಂಜೆ ಗ್ರಾಮಕ್ಕೆ ಕಾಲಿಟ್ಟಾಗ ಗ್ರಾಮಸ್ಥರ ಸಂಭ್ರಮ ಮುಗಿಲು ಮುಟ್ಟಿತ್ತು. ಕಾಮನ್‌ವೆಲ್ತ್‌ ಮತ್ತು ಏಷ್ಯನ್‌ ಗೇಮ್ಸ್‌ ನಲ್ಲಿ ಚಿನ್ನ ಗೆದ್ದ ತಮ್ಮೂರಿನ ಹುಡುಗಿಗೆ ಅಭಿನಂದನೆ ಸಲ್ಲಿಸಿದ್ರು. ಮನೆ ಮಗಳಿಗೆ ಸನ್ಮಾನ ಮಾಡಿದ್ರು. ತವರಿನ ಸ್ವಾಗತ, ಅಭಿಮಾನಕ್ಕೆ ಅಶ್ವಿನಿ ಭಾವುಕರಾದ್ರು.
ಬದುಕಿನಲ್ಲಿ ಅಂದುಕೊಂಡಿದ್ದನ್ನ ಸಾಧಿಸಬೇಕು ಎಂಬ ಹಠಕ್ಕೆ ಬಿದ್ದ ಅಶ್ವಿನಿ ಮನೆಯವರಿಂದ ದೂರ ಉಳಿದ್ರು. ಮನೆಯಲ್ಲಿ ಬಡತನವಿದ್ರೂ ಅಕ್ಕುಂಜೆಯ ಪ್ರತಿಭೆಯಲ್ಲಿ ಬಡತನವಿರಲಿಲ್ಲ. ಕಠಿಣ ಶ್ರಮ, ಬದ್ಧತೆಯ ಮೂಲಕ ಯಶಸ್ಸು ಸಾಧಿಸಿದ್ರು. ಹಾಗಂತ ತವರಿನ ಒಡನಾಟ, ತಾನು ಹುಟ್ಟಿ ಬೆಳೆದ ಊರನ್ನು ಈಕೆ ಮರೆತಿಲ್ಲ.. ಅಲ್ಲಿನ ಬದುಕಿನ ತುಣುಕುಗಳು ಇನ್ನೂ ಅಶ್ವಿನಿಯ ಮನದಲ್ಲಿ ಸಿಹಿ ನೆನಪುಗಳಾಗಿ ಉಳಿದಿವೆ.
ಈ ನಡುವೆ ಆಶ್ವಿನಿ ಹಳೆಯ ದಿನಗಳಿಗೆ ಜಾರಿಕೊಂಡ್ರು... ಅಣ್ಣ, ಅಕ್ಕನ ಜತೆ ಓಡಾಡಿದ ಕ್ಷಣಗಳನ್ನ ನೆನಪಿಸಿಕೊಂಡ್ರು. ಅಜ್ಜನ ಜತೆಗಿನ ತರ್ಲೆಗಳು, ತನ್ನ ಕ್ರೀಡಾಬದುಕಿಗೆ ಅಪ್ಪ- ಅಮ್ಮ ನೀಡಿದ ಪ್ರೋತ್ಸಾಹ... ಬಡತನದ ಬೇಗೆಯಲ್ಲಿ ಅಮ್ಮ ಕೈ ಬಳೆಯನ್ನೇ ಅಡವಿಟ್ಟ ಕ್ಷಣಗಳು ಹೀಗೆ ತನ್ನ ಬದುಕಿನ ಕಷ್ಟದ ದಿನಗಳು ಒಂದು ಕ್ಷಣ ಕಣ್ಮುಂದೆ ಹಾದು ಹೋದವು. ಆದ್ರೆ ಈಗ ಅಶ್ವಿನಿಯ ಮುಖದಲ್ಲಿ ನೋವಿಲ್ಲ. ಜೀವನದಲ್ಲಿ ಯಶ ಸಾಧಿಸಿದ ಖುಷಿ ಇದೆ. ಹಾಗಂತ ತನ್ನ ಕಷ್ಟದ ದಿನಗಳನ್ನ ಮಾತ್ರ ಇನ್ನೂ ಮರೆತಿಲ್ಲ.
ಅಷ್ಟೇ ಅಲ್ಲ, ತಾನು ಓಡಾಡಿದ... ಅಭ್ಯಾಸ ಮಾಡುತ್ತಿದ್ದ ದಾರಿಯಲ್ಲೇ ಮತ್ತೆ ಓಡಾಡಿದ್ರು. ತನ್ನ ತಂದೆಯ ಜತೆ ಬಜಾಜ್‌ ಎಮ್‌ಐಟಿಯಲ್ಲಿ ಸವಾರಿ ಮಾಡಿ ಖುಷಿ ಪಟ್ರು,,. ಗದ್ದೆ, ತೋಟಗಳಲ್ಲಿ ಹಾದಿ ಮದ್ಯೆ ಸರ್ಕಸ್ ಮಾಡ್ತಾ ಎಂಜಾಯ್ ಮಾಡಿದ್ರು.. ಗೆಲುವಿನ ಉತ್ತುಂಗಕ್ಕೆ ಏರಿದ್ರೂ ತನ್ನ ನೆಲದ ಮಣ್ಣಿನ ಸೊಗಸನ್ನು ಆಸ್ವಾದಿಸೋ ಮುಗ್ಧ ಮನಸ್ಸಿನ ಭಾವವನ್ನು ವ್ಯಕ್ತಪಡಿಸಿದ್ರು..
ಹಾಗೇ ಅಶ್ವಿನಿ ದೇವರ ಮೇಲೆ ಅಪಾರ ನಂಬಿಕೆಯನ್ನಿಟ್ಟುಕೊಂಡಿದ್ದಾರೆ. ತನ್ನ ಸಾಧನೆಗೆಲ್ಲಾ ದೇವ್ರ ಆಶೀರ್ವಾದವೇ ಕಾರಣ ಅಂತಾರೆ ಅಶ್ವಿನಿ. ಮುಖ್ಯವಾಗಿ ಗ್ರಾಮದ ಸಿದ್ಧೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು. ಬಳಿಕ ಕಮಲಶಿಲೆಯ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಅಶ್ವಿನಿಯವರನ್ನ ಆತ್ಮೀಯವಾಗಿ ಬರಮಾಡಿಕೊಂಡಿತ್ತು. ಇದೇ ವೇಳೆ ದೇವಸ್ಥಾನದ ಆಡಳಿತ ಮೊಕ್ತೇಸರರು ಅಶ್ವಿನಿಗೆ ಚಿನ್ನದ ಹಾರ ಹಾಕಿ ಸನ್ಮಾನಿಸಿದ್ರು..
ಹೀಗೆ ಬಡತನದ ಹರ್ಡಲ್ಸ್ ದಾಟಿ ಚಿನ್ನ ಗೆದ್ದ ಹೆಮ್ಮೆಯ ಗ್ರಾಮೀಣ ಪ್ರತಿಭೆಗೆ ತನ್ನ ನೆಲದಲ್ಲಿ ಸಂದ ಗೌರವ ಇದು.. ಒಟ್ಟಿನಲ್ಲಿ ಕಲ್ಲು-ಮುಳ್ಳಿನ ಹಾದಿಯಲ್ಲಿ ಗೆಲುವಿನ ರುಚಿ ಕಂಡ ಅಶ್ವಿನಿ ಇನ್ನೂ ಎತ್ತರ ಎತ್ತರಕ್ಕೆ ಗೆಲುವಿನ ಉತ್ತುಂಗಕ್ಕೇರ್ಲಿ.. ಒಲಿಂಪಿಕ್ಸ್‌ ನಲ್ಲೂ ಪದಕ ಗೆದ್ದು ಬಾ ಮಗಳೆ ಅಂತ ಅಭಿಮಾನಿಗಳು ಹಾರೈಸಿದ್ರು. .
ಸನತ್ ರೈ

ಸಿಎಂ ಸಾಹೇಬ್ರೇ … ಸ್ವಲ್ಪ ಕೇಳ್ತೀರಾ...1

ಸಿಎಂ ಸಾಹೇಬ್ರೇ, ಈ ರಾಜ್ಯದ ಕ್ರೀಡಾ ಸಚಿವರು ಯಾರು..? ಅವ್ರು ಎಲ್ಲಿದ್ದಾರೆ..? ಏನು ಮಾಡ್ತಿದ್ದಾರೆ..? ಏಷ್ಯನ್‌ ಗೇಮ್ಸ್‌ನಲ್ಲಿ ರಾಜ್ಯದ ನಾಲ್ಕು ಕ್ರೀಡಾಪಟುಗಳು ಚಿನ್ನ ಹಾಗೂ ಒಬ್ರು ಕಂಚಿನ ಪದಕ ಗೆದ್ದಿದ್ದಾರೆ. ಇದು ಕ್ರೀಡಾ ಸಚಿವರಿಗೆ ಗೊತ್ತಾ..? ಆಟ್‌ಲೀಸ್ಟ್‌ ನಿಮಗಾದ್ರೂ ಗೊತ್ತಾ..? ಗೊತ್ತಿದ್ರೂ ನಿಮಗೆಲ್ಲಿದೆ ಟೈಮ್‌..? ಭೂ ಹಗರಣ, ಆ ಹಗರಣ.., ಈ ಹಗರಣ ಅಂತ ರಾಜಕೀಯ ದೊಂಬರಾಟದಲ್ಲಿ ಎಲ್ಲವನ್ನ ಮರೆತಂತಿದೆ. ಯಾಕ್‌ ಸಾರ್‌..? ನಮ್ಮ ಕ್ರೀಡಾಪಟುಗಳ ಮೇಲೆ ಅಷ್ಟೊಂದು ನಿರ್ಲಕ್ಷ್ಯ..?
ಆದ್ರೂ, ನೆನಪಿಟ್ಟುಕೊಳ್ಳಿ... ನಮ್ಮ ರಾಜ್ಯದ ಕ್ರೀಡಾಪಟುಗಳು ಗೆದ್ದಿದ್ದು ಅಂತಿಂಥ ಚಿನ್ನವಲ್ಲ. ಏಷ್ಯನ್‌ ಕ್ರೀಡಾಮೇಳದ ಪದಕಗಳು... ಅಲ್ಲಿ ಪದಕ ಗೆದ್ದಿರುವುದು, ರಾಜಕಾರಣಿಗಳು ಚುನಾವಣೆಯಲ್ಲಿ ಗೆದ್ದಂಗೆ ಅಲ್ಲ. ದುಡ್ಡು ಚೆಲ್ಲಿ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕಾಗಿ ಕಚ್ಚಾಟ ನಡೆಸಬಹುದು. ಒಂದಿಷ್ಟು ದುಡ್ಡುಮಾಡಬಹುದು. ಆದ್ರೆ ಇಲ್ಲಿ ಹಾಗಲ್ಲ...ಇಲ್ಲಿ ಕಠಿಣ ಶ್ರಮಕಷ್ಟೇ ಬೆಲೆ. ಜೀವದ ಹಂಗನ್ನೇ ಮರೆತು ಅಖಾಡಕ್ಕೆ ಧುಮುಕಿ ಪದಕ ಗೆಲ್ಲುವುದು ಎಷ್ಟು ಕಷ್ಟ ಅಂತ ಅದನ್ನು ಸಾಧಿಸಿದವರಿಗೆ ಮಾತ್ರ ಗೊತ್ತು.
ಆದ್ರೂ ನಮ್ಮ ಕ್ರೀಡಾಪಟುಗಳ ಮೇಲೆ ನಿಮಗೆ ಸ್ವಲ್ಪನೂ ಹೆಮ್ಮೆ ಇಲ್ವಾ..? ನಮ್ಮವರು ಚಿನ್ನ ಗೆದ್ದಿದ್ದಾರೆ.. ರಾಜ್ಯಕ್ಕೆ ಹೆಸರು ತಂದಿದ್ದಾರೆ. ಅವ್ರನ್ನ ಭೇಟಿ ಮಾಡಿ ಅಭಿನಂದನೆ ಸಲ್ಲಿಸಬೇಕು ಎಂಬ ಕನಿಷ್ಠ ಜ್ಞಾನವೂ ಇಲ್ವಾ..? ಇದಕ್ಕಾಗಿ ನಿಮ್ಮಲ್ಲಿ ಒಂದೈದು ನಿಮಿಷವೂ ಪುರುಸೊತ್ತೂ ಇಲ್ವಾ..?
ಬಿಡಿ ಸಾರ್‌, ನೀವು ತುಂಬಾನೇ ಬಿಝಿ...ಇವ್ರೆಲ್ಲಾ ಪದಕ ಗೆದ್ರೆ ನಿಮಗೇನಾಗಬೇಕಿದೆ.... ನಿಮಗೆ ಅಧಿಕಾರ ಮುಖ್ಯ... ಪಕ್ಷ ಮುಖ್ಯ... ಕುಟುಂಬ ಮುಖ್ಯ.. ಅಷ್ಟಕ್ಕೂ ಯಾರದೋ ಮನೆಯ ಹುಡುಗ-ಹುಡುಗಿಯರು ಕ್ರೀಡಾಲೋಕದಲ್ಲಿ ಸಾಧನೆ ಮಾಡಿದ್ರೆ ನಿಮಗೇನು ಲಾಭ ಇಲ್ಲಾ ಅಲ್ವಾ ಸಾರ್‌...
ತಪ್ಪು ತಿಳ್ಕೊಬೇಡಿ.. ನಿಮ್ಮ ಬಾಯಿ ಯಾವಾಗ್ಲೂ ಅಭಿವೃದ್ದಿಯ ಮಂತ್ರ ಪಠಿಸುತ್ತಲೇ ಇರ್ತದೆ. ಅದಕ್ಕಾಗಿಯೇ ಈ ಮಾತುಗಳು... ಆದ್ರೆ ನಮ್ಮ ರಾಜ್ಯದ ಕ್ರೀಡಾ ರಂಗ ಯಾವ ಪರಿಸ್ಥಿತಿಯಲ್ಲಿದೆ ಎಂಬುದು ನಿಮಗೆ ಗೊತ್ತಿದೆಯೋ ಇಲ್ವೋ.. ಬಜೆಜ್‌ನಲ್ಲಿ ಕೋಟಿ ಕೋಟಿ ಹಣವನ್ನ ಬೇರೆ ಬೇರೆ ಕ್ಷೇತ್ರಗಳಿಗೆ ಮೀಸಲಿಡುತ್ತೀರಿ. ಮಠಗಳಿಗೆ ಅದೆಷ್ಟೋ ಹಣ ಹಂಚಿದ್ದೀರಿ. ಆದ್ರೆ ಕ್ರೀಡೆಗೆ ಎಷ್ಟು ಕೊಟ್ಟಿದ್ದೀರಾ..? ಹಾಗಂತ ಹಿಂದಿನ ಸರ್ಕಾರ ಎಷ್ಟು ಕೊಟ್ಟಿದೆ ಅಂತ ಕೇಳೋಕೆ ಹೋಗ್ಬೇಡಿ...ನೀವೇನೂ ಮಾಡಿದ್ದೀರಾ..ಅಂತ ನೋಡಿ. ರಾಜ್ಯದ ಕ್ರೀಡಾಂಗಣಗಳು... ಕ್ರೀಡಾ ಇಲಾಖೆ ಯಾವ ಸ್ಥಿತಿಯಲ್ಲಿದೆ ಎಂಬುದನ್ನ ನೀವೇ ಖುದ್ದಾಗಿ ಭೇಟಿ ಮಾಡಿದ್ರೆ ಗೊತ್ತಾಗುತ್ತೆ...
ಅಷ್ಟಕ್ಕೂ ಏಷ್ಯನ್‌ಗೇಮ್ಸ್‌ನಲ್ಲಿ ಪದಕ ಗೆದ್ದಿದ್ದಾರಲ್ಲ.. ಅವ್ರೆಲ್ಲಾ ಶ್ರೀಮಂತರಲ್ಲ. ಬಡತನದ ಬೇಗೆಯಲ್ಲಿ ಅರಳಿದ ಪ್ರತಿಭೆಗಳು. ಅವ್ರ ಯಶಸ್ಸಿನ ಹಿಂದೆ ಹೆತ್ತವರ ಬೆವರಿನ ಹನಿ ಇದೆ. ಆದ್ರೂ ನೀವೂ ದೊಡ್ಡವರು. ಪದಕ ಗೆದ್ದವರ ಸಾಧನೆ-ಪರಿಶ್ರಮಕ್ಕೆ ತಕ್ಕ ಪ್ರತಿಫಲ ನೀಡಬೇಕಿತ್ತು. ಅದು ಬಿಡಿ, ಬೆನ್ನಾದ್ರೂ ತಟ್ಟುವ ದೊಡ್ಡತನವನ್ನ ತೋರಲಿಲ್ಲ.
ಹಾಗಂತ ಪದಕ ಗೆದ್ದವರು ನಿಮ್ಮ ಶಾಸಕರಂತೆ ಬೇಡಿಕೆಯನ್ನಿಟ್ಟಿಲ್ಲಾ. ಬದುಕು ಸಾಗಿಸಲು ಕೆಲಸ ಅಷ್ಟೇ.. ಇನ್ನು ‘ಜಿ’ ಕೆಟಗೆರಿ ಸೈಟ್‌ ಅಂತೂ ಕೇಳಲೇ ಇಲ್ಲಾ ಬಿಡಿ ಸಾರ್‌... ಇದನ್ನೂ ನಿಮಗೆ ಕೊಡೋಕೆ ಆಗದಿದ್ರೆ ನಮ್ಮ ಕ್ರೀಡಾಪಟುಗಳು ಬೇರೆ ರಾಜ್ಯಕ್ಕೆ ವಲಸೆ ಹೋಗುವುದನ್ನ ತಪ್ಪಿಸೋಕೆ ಆಗೋಲ್ಲ. ಆದ್ರೂ ನೀವು ಹಂಗೆಲ್ಲಾ ಮಾಡೋಕೆ ಬಿಡಬೇಡಿ ಸಾರ್‌... ರೆಸಾರ್ಟ್ ರಾಜಕೀಯ... ಅಪರೇಷನ್‌ ಎಮ್‌ಎಲ್‌ಎ... ಅದೆನೇನೋ ಮಾಡ್ತಾರಲ್ಲ... ಅದಕ್ಕೆಲ್ಲಾ ಕಡಿವಾಣ ಹಾಕಿ ನಮ್ಮ ಕ್ರೀಡಾಪಟುಗಳಿಗೆ ದಯವಿಟ್ಟು ಪ್ರೋತ್ಸಾಹ ಕೊಡಿ ಸಾರ್‌.

ವಂದನೆಗಳು
ಸನತ್ ರೈ