Tuesday, August 14, 2012
ಹೀರೋ ಟು ಝಿರೊ...
ಇದು ಸುಮಾರು ಹತ್ತು ಹನ್ನೆರಡು ವರ್ಷಗಳ ಹಿಂದಿನ ಫ್ಲಾಷ್ ಬ್ಯಾಕ್.. ಅದು ಮ್ಯಾಚ್ ಫಿಕ್ಸಿಂಗ್ ಅನ್ನೋ ಪೆಡಂಭೂತ ಭಾರತ ಕ್ರಿಕೆಟ್ ತಂಡವನ್ನ ಆವರಿಸಿಕೊಂಡ ಸಮಯ...ತಂಡದಲ್ಲಿ ಸ್ಟಾರ್ ಆಟಗಾರರಿದ್ರೂ ಗೆಲ್ಲುವ ಪಂದ್ಯದಲ್ಲಿ ಸೋಲುತ್ತಿದ್ರು. ಸೋಲುವ ಪಂದ್ಯದಲ್ಲಿ ಗೆಲುವು ಸಾಧಿಸಿ ಅಚ್ಚರಿ ಮೂಡಿಸುತ್ತಿದ್ರು.
ಆಗಲೇ ಸಚಿನ್ ತೆಂಡುಲ್ಕರ್‌ಗೆ ನಾಯಕತ್ವದ ಸಹವಾಸನೇ ಸಾಕು ಅನ್ಸಿದ್ದು. ಸಾಲು ಸೋಲುಗಳಿಂದ ಕಂಗೆಟ್ಟ ಕಾರಣ ಮಾಸ್ಟರ್ ಬ್ಲ್ಯಾಸ್ಟರ್‌ನ ಆಟದ ಝಲಕ್ ಕೂಡ ಮಾಯವಾಗಿತ್ತು. ಜತೆಗೆ ತಂಡದಿಂದ ಸಾಂಘಿಕ ಆಟ ಕೂಡ ಹೊರಬರ್ತಿರಲಿಲ್ಲ. ಇದ್ರಿಂದ ಸಚಿನ್ ತೆಂಡುಲ್ಕರ್ ಬೇಸೆತ್ತು ನಾಯಕನ ಪಟ್ಟದಿಂದ ಕೆಳಗಿಳಿದ್ರು.
ಇನ್ನೇನೂ ತಂಡಕ್ಕೊಬ್ಬ ಹೊಸ ನಾಯಕ ಬೇಕು... ಅದು ಯುವ ಆಟಗಾರನಾಗಬೇಕು. ಹಾಗಂತ ಆಯ್ಕೆ ಸಮಿತಿ ಯೋಚನೆ ಮಾಡ್ತಾ ಇರೋವಾಗ್ಲೆ ತಟ್ಟನೇ ಹೊಳೆದ ಹೆಸರು ಸೌರವ್ ಗಂಗೂಲಿ.
ಅರೇ, ಸೌರವ್ ಗಂಗೂಲಿನಾ.. ಅಂತ ಅನೇಕರು ಹುಬ್ಬೇರಿಸಿದ್ರು. ಯಾಕಂದ್ರೆ ಗಂಗೂಲಿ ಮುಂಗೋಪಿ... ಅದಕ್ಕಿಂತಲೂ ಹೆಚ್ಚಾಗಿ ಅಹಂಕಾರಿ...ಆದ್ರಿಂದ ಸೌರವ್ ಹೇಗೆ ತಂಡವನ್ನ ಮುನ್ನಡೆಸುತ್ತಾರೆ ಅನ್ನೋ ಟೀಕೆಗಳು ಆಗ ಕೇಳಿಬಂದಿದ್ದವು. ಆದ್ರೆ ಆಯ್ಕೆ ಸಮಿತಿಗೆ ಅಂತಹ ವ್ಯಕ್ತಿಯೇ ಬೇಕಿತ್ತು. ಅವ್ಯವಸ್ಥೆಯ ಅಗರವಾಗಿದ್ದ ತಂಡವನ್ನ ಸರಿಯಾಗಿ ಮುನ್ನಡೆಸಲು ಗಂಗೂಲಿಯೇ ಬೆಸ್ಟ್ ಅಂತ ಆಯ್ಕೆ ಸಮಿತಿ ತೀರ್ಮಾನಿಸಿತ್ತು.
ಅಲ್ಲಿಂದ ಶುರುವಾಗಿದ್ದು ಗಂಗೂಲಿಯ ಪರ್ವ.. ಭಾರತ ಕ್ರಿಕೆಟ್ ತಂಡದ ಬದಲು ಟೀಮ್ ಇಂಡಿಯಾ ಅನ್ನೋ ಹೆಸರಿನೊಂದಿಗೆ ವಿಶ್ವ ಕ್ರಿಕೆಟ್‌ನಲ್ಲಿ ಕಾಳಗ ನಡೆಸಲು ಕೊಲ್ಕತ್ತಾದ ಮಹಾರಾಜ ಮುಂದಾದ್ರು. ಅಷ್ಟೇ ಅಲ್ಲ, ಆಯ್ಕೆ ಸಮಿತಿಯ ಮುಂದೆ ಧ್ವನಿ ಎತ್ತಿ ಮಾತನಾಡಿ ಯುವ ಆಟಗಾರರಿಗೆ ಅವಕಾಶ ಕಲ್ಪಿಸಿದ್ರು. ಇದ್ರಿಂದಾಗಿಯೇ ಸೆಹ್ವಾಗ್, ಯುವರಾಜ್ ಸಿಂಗ್, ಜಹೀರ್‌ಖಾನ್, ಹರ್ಭಜನ್ ಸಿಂಗ್‌ನಂತಹ ಆಟಗಾರರು ವಿಶ್ವ ಕ್ರಿಕೆಟ್‌ನಲ್ಲಿ ಇಂದು ಮಿಂಚು ಹರಿಸಲು ಸಾಧ್ಯವಾಯ್ತು.
ಈ ನಡುವೆ, ಗಂಗೂಲಿಯ ನಾಯಕತ್ವಕ್ಕೆ ವಿದೇಶಿ ಕೋಚ್ ಜಾನ್ ರೈಟ್‌ನ ಮಾರ್ಗದರ್ಶನವೂ ಸಿಕ್ಕಿತ್ತು. ಹೀಗೆ ಹೊಸ ಆಯಾಮ ಪಡೆದುಕೊಂಡ ಟೀಮ್ ಇಂಡಿಯಾ ನಿಧಾನವಾಗಿಯೇ ಗೆಲುವಿನ ನಗೆ ಬೀರಲು ಶುರು ಮಾಡಿತ್ತು. ಅದ್ರಲ್ಲೂ ವಿದೇಶಿ ನೆಲದಲ್ಲಿ ಮರಿಚೀಕೆಯಾಗಿದ್ದ ಗೆಲುವು ಗಂಗೂಲಿ ನಾಯಕತ್ವದಲ್ಲೇ ಒಲಿದು ಬಂತು.
ಇನ್ನೊಂದೆಡೆ, ವಿಶ್ವಚಾಂಪಿಯನ್ ತಂಡವಾಗಿ ಹೊರಹೊಮ್ಮಿದ್ದ ಆಸ್ಟ್ರೇಲಿಯನ್ನರು ವಿಶ್ವ ಕ್ರಿಕೆಟ್‌ನಲ್ಲಿ ಸೋಲಿಲ್ಲದ ಸರದಾರನಂತೆ ಮೆರೆದಾಡುತ್ತಿದ್ರು. ಆಗ ಆಸ್ಟ್ರೇಲಿಯನ್ನರಿಗೆ ತಿರುಗೇಟು ನೀಡಿ ಗರ್ವ ಭಂಗ ಮಾಡಿದ್ದು ಇದೇ ಕೊಲ್ಕತ್ತಾದ ಮಹಾರಾಜ ಎಂಬುದನ್ನ ಮರೆಯುವ ಹಾಗಿಲ್ಲ.
ಇನ್ನು, ದಾದಾನ ಆಕ್ರಮಣಕಾರಿ ಪ್ರವೃತ್ತಿಯೇ ಗೆಲುವಿನ ಸೂತ್ರವಾಗಿತ್ತು. ಅದ್ರಲ್ಲೂ ಇಂಗ್ಲೆಂಡ್ ವಿರುದ್ಧ 2002ರಲ್ಲಿ ನಡೆದ ನ್ಯಾಟ್ ವೆಸ್ಟ್ ಸರಣಿಯಲ್ಲಿ ಲಾಡ್ಸ್ ನ ಬಾಲ್ಕನಿ ಮೇಲೆ ಗಂಗೂಲಿ ಶರ್ಟ್ ಬಿಚ್ಚಿ ಕುಣಿದು ಸಂಭ್ರಮಿಸಿದ ಕ್ಷಣವನ್ನ ಇವತ್ತಿಗೂ ಮರೆಯೋಕೆ ಆಗೊಲ್ಲ. .
ಹಾಗೇ, 2003ರ ವಿಶ್ವಕಪ್‌ನಲ್ಲೂ ಗಂಗೂಲಿ ತಂಡವನ್ನ ಮುನ್ನಡೆಸಿದ ರೀತಿ ಅದ್ಭುತವಾಗಿತ್ತು. ತಂಡದಲ್ಲಿ ಏಳು ಬ್ಯಾಟ್ಸ್ ಮನ್ ಗಳು ಇರಲೇಬೇಕು ಅನ್ನೋ ಕಾರಣಕ್ಕೆ ದ್ರಾವಿಡ್‌ಗೆ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನ ನೀಡಿದ್ರು. ಜತೆಗೆ ತಂಡ ಗೆಲುವಿನ ಒಂದೊಂದೇ ಮೆಟ್ಟಿಲು ಏರುತ್ತಾ ಸಾಗಿದ್ರೂ ಫೈನಲ್‌ನಲ್ಲಿ ಮುಗ್ಗರಿಸಿತ್ತು. ಆದ್ರೂ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಗಂಗೂಲಿ ಎವರ್‌ಗ್ರೀನ್ ಹೀರೋ. .
ನಂತ್ರ ಮಹಾರಾಜನ ಆಟ ಮಂಕಾಗಿ ಹೋಯ್ತು... ನಾಯಕತ್ವದ ಬಗ್ಗೆ ಅಪಸ್ವರಗಳು ಕೇಳಿಬಂದವು. ಇದಕ್ಕೆ ತಕ್ಕಂತೆ ಕೋಚ್ ಜಾನ್ ರೈಟ್ ಅವಧಿ ಕೂಡ ಮುಗಿದಿತ್ತು. ಬಳಿಕ ಗ್ರೇಗ್ ಚಾಪೆಲ್ ತಂಡದ ತರಬೇತುದಾನಾದ್ರು. ಆದ್ರೆ ಗಂಗೂಲಿ ಮತ್ತು ಚಾಪೆಲ್‌ಗೆ ಅದ್ಯಾಕೋ ಕೂಡಿ ಬರ್ತಿರಲಿಲ್ಲ. ಇದೇ ವೇಳೆ ಗಂಗೂಲಿಗೆ ಫಾರ್ಮ್ ಕೂಡ ಕೈಕೊಟ್ಟಿತ್ತು.
ಇದ್ರಿಂದ ನಾಯಕತ್ವದದಿಂದ ದಾದಾ ಅನಿವಾರ್ಯವಾಗಿ ಕೆಳಗಿಳಿಯಬೇಕಾಯ್ತು. ಅಷ್ಟೇ ಅಲ್ಲ, ತಂಡಕ್ಕೆ ಬಂದು ಹೋಗುವ ಅತಿಥಿ ಆಟಗಾರನಾಗಬೇಕಾಯ್ತು. ಆದ್ರೂ ಗಂಗೂಲಿಗೆ ಇನ್ನೂ ಆಡಬೇಕು ಅನ್ನೋ ಹಂಬಲವಿತ್ತು. ಕೊನೆಗೆ ಫಾರ್ಮ್ ಕಂಡುಕೊಂಡು ತಂಡದೊಳಗೆ ರಿ ಎಂಟ್ರಿಯಾದ್ರೂ ಮತ್ತೆ ನಾಯಕನಾಗುವ ಅವಕಾಶ ಮಾತ್ರ ಸಿಗಲೇ ಇಲ್ಲ. ಕೊನೆಗೂ ದಾದಾ ನಿರಾಸೆಯಿಂದಲೇ ಕ್ರಿಕೆಟ್ ಬದುಕಿಗೆ ಗುಡ್ ಬೈ ಹೇಳಿದ್ರು.
ಕ್ಯಾಪ್ಟನ್ ಸೌರವ್ ಗಂಗೂಲಿ ಮೂಲೆಗುಂಪು ಅದಾಗ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಸಾರಥಿಯಾದ್ರು. ಆದ್ರೆ ದ್ರಾವಿಡ್ ಖುಷಿ ಪಡುವ ಹಾಗಿರಲಿಲ್ಲ. ಯಾಕಂದ್ರೆ ಟೀಮ್ ಇಂಡಿಯಾ ಯಜಮಾನನ ಸಿಂಹಾಸನ ಮುಳ್ಳಿನ ಸಿಂಹಾಸನ ಅನ್ನೋದು ದ್ರಾವಿಡ್‌ಗೆ ಗೊತ್ತಿಲ್ಲದ ವಿಚಾರವೇನೂ ಆಗಿರಲಿಲ್ಲ.
ಆದ್ರೂ ದ್ರಾವಿಡ್ ಚಾಲೆಂಜ್ ಆಗಿಯೇ ಸ್ವೀಕರಿಸಿದ್ರು. ದುರಾದೃಷ್ಟ ಅಂದ್ರೆ ಅದೇ ಟೈಮ್‌ನಲ್ಲಿ ಟೀಮ್ಇಂಡಿಯಾದ ಹಿರಿಯ ಆಟಗಾರರು ಗಾಯ ಮತ್ತು ಕೆಟ್ಟ ಫಾರ್ಮ್‌ನಿಂದಾಗಿ ಕಂಗೆಟ್ಟಿದ್ರು. ತೆಂಡುಲ್ಕರ್ ಟೆನಿಸ್ ಎಲ್ಬೊ ನೋವಿನಿಂದ ಬಳಲುತ್ತಿದ್ರು. ಈ ನಡುವೆ ತಂಡದೊಳಗೆ ಯುವ ಆಟಗಾರರ ಆಗಮನವೂ ಆಯ್ತು. ಮತ್ತೊಂದೆಡೆ, ಹಿರಿಯ ಆಟಗಾರರನ್ನ ಮನೆಗೆ ಕಳುಹಿಸಬೇಕು ಅಂತ ಪಣತೊಟ್ಟಿದ್ದ ಕೋಚ್ ಗ್ರೆಗ್ ಚಾಪೆಲ್ ದ್ವಂದ ನೀತಿಯನ್ನ ಅನುಸರಿಸಿದ್ರು.
ಆದ್ರೆ, ದ್ರಾವಿಡ್ ಕಂಗೆಡಲಿಲ್ಲ. ರೈನಾ, ಧೋನಿ, ಯುವರಾಜ್‌ಸಿಂಗ್ ನಂತಹ ಆಟಗಾರರು ಬ್ಯಾಟಿಂಗ್‌ನಲ್ಲಿ ಪ್ರಬುದ್ಧತೆ ತೋರಿಸಿದ್ರು.ಜತೆಗೆ ಇರ್ಪಾನ್ ಪಠಾಣ್, ಆರ್. ಪಿ.ಸಿಂಗ್, ಹರ್ಭಜನ್ ಸಿಂಗ್ ಬೌಲಿಂಗ್‌ನಲ್ಲಿ ಮೋಡಿ ಮಾಡಿದ್ರು. ಇದ್ರಿಂದ ದ್ರಾವಿಡ್ ನಾಯಕತ್ವದಲ್ಲೂ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡುತ್ತಾ ಸಾಗಿತ್ತು.
ಇನ್ನೊಂದೆಡೆ, ಕೋಚ್ ಗ್ರೇಗ್ ಚಾಪೆಲ್ ಉಪಟಳದಿಂದ ದ್ರಾವಿಡ್‌ಗೆ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹೆಡ್ ಮಾಸ್ಟರ್‌ನ ರೀತಿಯಲ್ಲಿ ವರ್ತಿಸುತ್ತಿದ್ದ ಚಾಪೆಲ್ ಹೇಳಿದ್ದಕ್ಕೆಲ್ಲಾ ದ್ರಾವಿಡ್ ತಲೆಯಾಡಿಸುತ್ತಿದ್ರು. ತಂಡದಲ್ಲಿ ಉಸಿರು ಕಟ್ಟುವ ವಾತಾವರಣವಿದ್ರೂ ರಾಹುಲ್ ಎಲ್ಲವನ್ನ ಸಹಿಸಿಕೊಂಡಿದ್ರು. ಹಾಗೇ, ಕೂಲ್ ಆಗಿಯೇ ವಿದೇಶಿ ನೆಲದಲ್ಲಿ ಕೆಲವೊಂದು ಸರಣಿ ಗೆದ್ದು ಇತಿಹಾಸ ಬರೆಯುವಂತೆ ಮಾಡಿದ್ರು.
ಇನ್ನು, ದ್ರಾವಿಡ್ ನಾಯಕತ್ವಕ್ಕೆ ಸವಾಲು ಆಗಿದ್ದು 2007ರ ಕೆರೆಬಿಯನ್ ವಿಶ್ವಕಪ್. ವಿಶ್ವಕಪ್ ಗೆಲ್ಲಬೇಕು ಎಂಬುದು ಪ್ರತಿ ಆಟಗಾರನ ಕನಸು ಅಂದ ಮೇಲೆ ತನ್ನ ನಾಯಕತ್ವದಲ್ಲೇ ವಿಶ್ವಕಪ್ ಗೆಲ್ಲಬೇಕು ಅಂತ ದ್ರಾವಿಡ್ ಸಹ ಅಂದುಕೊಂಡಿದ್ರು. ಅಲ್ಲದೆ ಇದಕ್ಕಾಗಿ ತುಂಬಾನೇ ಪ್ಲಾನ್ ಕೂಡ ಮಾಡ್ಕೊಂಡಿದ್ರು.
ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡ್ಕೊಂಡು ಪ್ರಯೋಗಕ್ಕೆ ಮುಂದಾದ್ರು. ಸಚಿನ್ ತೆಂಡುಲ್ಕರ್ ತಂಡದ ಟ್ರಂಪ್ ಕಾರ್ಡ್ ಬ್ಯಾಟ್ಸ್ ಮನ್. ಇದ್ರಿಂದ ಸಚಿನ್ ಇನಿಂಗ್ಸ್ ಆರಂಭಿಸುವ ಬದಲು ಮಧ್ಯಮ ಕ್ರಮಾಂಕದಲ್ಲಿ ಆಡಬೇಕು ಎಂಬುದು ಗುರು ಚಾಪೆಲ್‌ನ ಕಟ್ಟಾಜ್ಞೆಯಾಗಿತ್ತು. ಇದನ್ನ ಸಚಿನ್ ಒಪ್ಪಿಕೊಳ್ಳದಿದ್ರೂ ದ್ರಾವಿಡ್ ಮಾತಿಗೆ ಬೆಲೆ ನೀಡಲೇಬೇಕಾಯ್ತು.
ಆದ್ರೆ ಕೆರೆಬಿಯನ್ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಆರಂಭದಲ್ಲೇ ಆಘಾತ ಅನುಭವಿಸಿತ್ತು. ಬಾಂಗ್ಲಾ ದೇಶ ವಿರುದ್ಧ ಸೋತು ಅವಮಾನ ಅನುಭವಿಸಿತ್ತು. ಅಷ್ಟೇ ಅಲ್ಲ, ವಿಶ್ವಕಪ್ ಟೂರ್ನಿಯ ಲೀಗ್‌ನಿಂದ ಹೊರನಡೆದು ಮುಖಭಂಗಕ್ಕೀಡಾಯ್ತು. ಅಷ್ಟೇ ಸಾಕಿತ್ತು. ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಿತ್ತ ನೆತ್ತಿಗೇರಿತ್ತು. ಕ್ರಿಕೆಟಿಗರನ್ನ ದೇವ್ರಂತೆ ಆರಾಧಿಸಿದ ಅಭಿಮಾನಿಗಳು ಕ್ರಿಕೆಟಿಗರುಗಳ ಪೋಸ್ಟರ್‌ಗಳನ್ನ ಬಿಕ್ಷುಕರಂತೆ ಬಿಂಬಿಸಿದ್ರು.
ಮತ್ತೊಂದೆಡೆ, ಸೋಲಿನ ಅವಮಾನದಿಂದ ಬೇಸೆತ್ತ ದ್ರಾವಿಡ್ ನಾಯಕತ್ವವನ್ನ ತ್ಯಜಿಸಿದ್ರು. ತಂಡದ ಹೀನಾಯ ಸ್ಥಿತಿಗೆ ಕಾರಣರಾಗಿದ್ದ ಕೋಚ್ ಗ್ರೇಗ್ ಚಾಪೆಲ್‌ಸಹ ಮನೆ ದಾರಿ ಹಿಡಿದ್ರು. ಇದ್ರೊಂದಿಗೆ ಟೀಮ್ ಇಂಡಿಯಾದಲ್ಲಿ ದ್ರಾವಿಡ್ ಅಧ್ಯಾಯ ಸಹ ಇತಿಹಾಸ ಪುಟ ಸೇರಿಕೊಂಡಿತ್ತು. ನಾಯಕತ್ವಕ್ಕೆ ಗುಡ್ ಬೈ ಹೇಳಿದ ರಾಹುಲ್ ಏಕದಿನ ಪಂದ್ಯದಿಂದ ದೂರವೇ ಉಳಿದ್ರು. ಹಾಗೇ ಕಳೆದ ವರ್ಷ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ರು. ಇದೀಗ ಟೆಸ್ಟ್ ಕ್ರಿಕೆಟ್‌ಗೂ ವಿದಾಯ ಹೇಳುವ ಸೂಚನೆ ನೀಡಿದ್ದಾರೆ.
ಏನೇ ಆಗ್ಲಿ, ದ್ರಾವಿಡ್ ನಾಯಕನಾಗಿ ಗಂಗೂಲಿಯಂತೆ ವಿಜೃಂಬಿಸದಿದ್ರೂ ಅನೇಕ ಯುವ ಆಟಗಾರರಿಗೆ ಸ್ಪೂರ್ತಿಯಾಗಿದ್ರು. ಈ ನಡುವೆ, ಚುಟುಕು ಕ್ರಿಕೆಟ್‌ಗೆ ಆಯಾಮ ಸಿಕ್ಕ ಬೆನ್ನಲ್ಲೇ ದ್ರಾವಿಡ್ ಹಿರಿಯ ಆಟಗಾರರನ್ನ ಆಡದಂತೆ ತಡೆಹಿಡಿದ್ರು. ಟ್ವೆಂಟಿ ಟ್ವೆಂಟಿ ಯುವಕರ ಆಟ.. ಹಿರಿಯ ಆಟಗಾರರು ಆಡುವುದಿಲ್ಲ ಅನ್ನೋ ಹೇಳಿಕೆ ನೀಡಿ ಕೆಲವು ಹಿರಿಯ ಆಟಗಾರರಿಗೆ ನಿರಾಸೆಯನ್ನುಂಟು ಮಾಡಿದ್ರು. ಆದ್ರೂ ಕಳೆದ ವರ್ಷ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಟಿ-ಟ್ವೆಂಟಿ ಪಂದ್ಯವನ್ನ ಆಡಿದ ರಾಹುಲ್ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ತನ್ನ ಸಾಮರ್ಥ್ಯವನ್ನ ಪ್ರದರ್ಶಿಸಿ ಚುಟುಕು ಕ್ರಿಕೆಟ್‌ಗೂ ವಿದಾಯ ಹೇಳಿದ್ರು. .
ಅದೇನೇ ಇರಲಿ.. ದ್ರಾವಿಡ್‌ಗೆ ಭವಿಷ್ಯದ ಟೀಮ್ ಇಂಡಿಯಾ ಬಗ್ಗೆ ದೂರದೃಷ್ಟಿ ಇತ್ತು. ಯುವ ಆಟಗಾರನಿಗೆ ನಾಯಕತ್ವ ವಹಿಸಬೇಕು ಅನ್ನೋದು ದ್ರಾವಿಡ್‌ನ ಆಸೆಯಾಗಿತ್ತು. ಮೊದಲೇ ಯುವ ನಾಯಕನ ಹುಡುಕಾಟದಲ್ಲಿದ್ದ ಬಿಸಿಸಿಐ ಮತ್ತು ಆಯ್ಕೆ ಸಮಿತಿಗೆ ಸಚಿನ್ ಜತೆ ಸೇರ್ಕೊಂಡು ಹೊಸ ನಾಯಕನ ಹೆಸರನ್ನ ಸೂಚಿಸಿದ್ರು. ಒಟ್ಟಿನಲ್ಲಿ, ದ್ರಾವಿಡ್ ವಿಶ್ವದ ಶ್ರೇಷ್ಠ ಆಟಗಾರನಾಗಿದ್ರೂ ನಾಯಕನಾಗಿ ಆರಕ್ಕೆರಳಿಲ್ಲ .ಮೂರಕ್ಕಿಳಿಯಲಿಲ್ಲ.
ಕೆರೆಬಿಯನ್ ವಿಶ್ವಕಪ್ ಟೂರ್ನಿಯ ಸೋಲನ್ನ ಟೀಮ್ ಇಂಡಿಯಾಗೆ ಅರಗಿಸಿಕೊಳ್ಳಲು ಸಾಧ್ಯನೇ ಇರಲಿಲ್ಲ. ಅಷ್ಟೇ ಅಲ್ಲ, ದೊಡ್ಡಣ್ಣ ಬಿಸಿಸಿಐ ಕೂಡ ಗರಂ ಆಗಿಬಿಟ್ಟಿತ್ತು. ಹೇಗಾದ್ರೂ ಸರಿ ಕಳೆದು ಹೋದ ಮರ್ಯಾದೆಯನ್ನ ಮತ್ತೆ ಪಡೆಯಬೇಕು ಎಂಬುದು ಬಿಸಿಸಿಐ ಮತ್ತು ಟೀಮ್ ಇಂಡಿಯಾದ ಗುರಿಯಾಗಿತ್ತು. ಇದಕ್ಕಾಗಿಯೇ ಚೊಚ್ಚಲ ಟ್ವೆಂಟಿ ಟ್ವೆಂಟಿ ಟೂರ್ನಿಗೆ ಟೀಮ್ ಇಂಡಿಯಾದ ಸಾರಥಿಯಾಗಿ ಮಹೇಂದ್ರ ಸಿಂಗ್ ಧೋನಿಯನ್ನ ಆಯ್ಕೆ ಮಾಡಲಾಯ್ತು.
ಆಗ ಎಲ್ರೂ ಅಚ್ಚರಿಗೊಂಡಿದ್ರು. ಸೆಹ್ವಾಗ್, ಯುವರಾಜ್ ಬದಲು ಧೋನಿಯ ಆಯ್ಕೆ ಎಷ್ಟರ ಮಟ್ಟಿಗೆ ಸರಿ ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಆದ್ರೆ ದ್ರಾವಿಡ್ ಮತ್ತು ಸಚಿನ್‌ಗೆ ಧೋನಿಯ ಎಬಿಲಿಟಿ ಏನು ಎಂಬುದು ಚೆನ್ನಾಗಿಯೇ ಗೊತ್ತಿತ್ತು. ಇದ್ರಿಂದ ಯಾರು ಕೂಡ ದೂಸ್ರಾ ಮಾತು ಆಡಲಿಲ್ಲ.
ಆದ್ರೂ ಚೊಚ್ಚಲ ಟ್ವೆಂಟಿ ಟ್ವೆಂಟಿಗೆ ತರಬೇತುದಾರನಿಲ್ಲದೆ ದಕ್ಷಿಣ ಆಫ್ರಿಕಾಗೆ ಪ್ರಯಾಣ ಬೆಳೆಸಿತ್ತು. ಮ್ಯಾನೇಜರ್ ಲಾಲ್ ಚಂದ್ ರಜಪೂತ್ ಧೋನಿಗೆ ಪಾತ್ರಧಾರಿಯಾದ್ರು. ಟೂರ್ನಿಯಲ್ಲಿ ನೋಡ ನೋಡುತ್ತಲೇ ಟೀಮ್ ಇಂಡಿಯಾ ಅಚ್ಚರಿಯ ಫಲಿತಾಂಶವನ್ನ ನೀಡಿತ್ತು. ಅಷ್ಟೇ ಅಲ್ಲ, ಫೈನಲ್‌ನಲ್ಲಿ ಬದ್ಧ ವೈರಿ ಪಾಕ್ ತಂಡವನ್ನ ಮಣಿಸಿದ ಟೀಮ್ ಇಂಡಿಯಾ ಚೊಚ್ಚಲ ಟ್ವೆಂಟಿ ಟ್ವೆಂಟಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಇಷ್ಟೇ ಸಾಕಿತ್ತು... ಧೋನಿಯ ನಾಯಕತ್ವದ ಬಗ್ಗೆ ಪ್ರಶಂಸೆಗಳ ಸುರಿಮಳೆ...ಪ್ರತಿಷ್ಠಿತ ಟೂರ್ನಿಯಲ್ಲಿ ತಂಡವನ್ನ ಧೋನಿ ಮುನ್ನಡೆಸಿದ ರೀತಿ ಕೂಡ ಅದ್ಭುತವಾಗಿತ್ತು. ಅದ್ರಲ್ಲೂ ಫೈನಲ್ ಪಂದ್ಯದ ಫೈನಲ್ ಓವರ್‌ನಲ್ಲಿ ಗ್ಯಾಂಬಲ್ ಮಾಡಿದ ಧೋನಿಯ ಧೈರ್ಯ ಕ್ರಿಕೆಟ್ ಪಂಡಿತರನ್ನೇ ಚಕಿತಗೊಳಿಸಿತ್ತು. ಜೋಗಿಂದರ್ ಶರ್ಮಾನ ಮೇಲಿಟ್ಟ ನಂಬಿಕೆಯೇ ಧೋನಿಯ ನಾಯಕತ್ವಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.
ನಂತ್ರ ಟೀಮ್ ಇಂಡಿಯಾದಲ್ಲಿ ಎಲ್ಲವೂ ಮಾಹಿಯ ಮಹಿಮೆ. ಟ್ವೆಂಟಿ ಟ್ವೆಂಟಿ ವಿಶ್ವಕಪ್ ಗೆದ್ದ ನಂತ್ರ ಧೋನಿ ಏಕದಿನ ತಂಡದ ನಾಯಕನಾದ್ರು. ಆರಂಭದಲ್ಲಿ ಧೋನಿ ಎಡವಿದ್ರೂ ನಿಧಾನವಾಗಿಯೇ ಗೆಲುವಿನ ಹಾದಿಯಲ್ಲಿ ತಂಡವನ್ನ ಮುನ್ನಡೆಸಿದ್ರು. ವಿದೇಶಿ ನೆಲದಲ್ಲೂ ಧೋನಿ ಮ್ಯಾಜಿಕ್ ಮಾಡಿದ್ರು. ಮರೀಚಿಕೆಯಾಗಿದ್ದ ಗೆಲುವುಗಳು ಟೀಮ್ ಇಂಡಿಯಾಗೆ ಒಲಿದು ಬಂದವು.
ಇನ್ನೊಂದೆಡೆ, ನಾಯಕತ್ವದಲ್ಲಿ ಪ್ರಬುದ್ಧತೆ ಸಾಧಿಸಿದ ಧೋನಿ ಕೂಲ್ ಕ್ಯಾಪ್ಟನ್ ಅಂತಲೇ ಬಿಂಬಿತವಾದ್ರು. ಸದಾ ಮಂದಹಾಸ ದಿಂದಲೇ ಮೋಡಿ ಮಾಡುವ ಧೋನಿ ಎದುರಾಳಿ ತಂಡಗಳ ವೀಕ್‌ನೆಸ್‌ಗಳನ್ನ ಬೇಗನೇ ಅರ್ಥಮಾಡಿಕೊಳ್ಳುತ್ತಿದ್ರು. ಅಷ್ಟೇ ಅಲ್ಲ, ಗೇಮ್ ಪ್ಲಾನ್‌ಗಳನ್ನ ಚೆಂಜ್ ಮಾಡ್ಕೊಂಡು ಟೀಮ್ ಇಂಡಿಯಾದ ಯಶಸ್ವಿ ನಾಯಕನಾಗುವ ಸೂಚನೆ ನೀಡಿದ್ರು.
ಅಷ್ಟರಲ್ಲೇ ಟೆಸ್ಟ್ ಕ್ಯಾಪ್ಟನ್ ಆಗಿದ್ದ ಅನಿಲ್ ಕುಂಬ್ಳೆ ಕೂಡ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ರು. ಇದ್ರಿಂದ ಧೋನಿ ಟೆಸ್ಟ್ ತಂಡದ ಸಾರಥಿಯಾದ್ರು. ಅಲ್ಲಿಂದ ಶುರುವಾಯ್ತು ಧೋನಿಯ ನಸೀಬು. ಸಾಲು ಸಾಲು ಗೆಲುವುಗಳು ತಂಡದ ಆತ್ಮವಿಶ್ವಾಸವನ್ನ ಹೆಚ್ಚಿಸಿತ್ತು. ಅಷ್ಟೇ ಅಲ್ಲ, ಟೆಸ್ಟ್ ಸರಣಿಗಳಲ್ಲಿ ಟೀಮ್ ಇಂಡಿಯಾ ಸೋಲಿಲ್ಲದ ಸರದಾರನಂತೆ ಮೆರೆದಾಡಿತ್ತು. ಜತೆಗೆ ಟೆಸ್ಟ್ ಚಾಂಪಿಯನ್ ಎಂಬ ಹೆಗ್ಗಳಿಕೆಗೂ ಪಾತ್ರವಾಯ್ತು.
ಆದ್ರೂ ಟ್ವೆಂಟಿ ಟ್ವೆಂಟಿ ವಿಶ್ವಕಪ್, ಏಷ್ಯಾಕಪ್ ಸೇರಿದಂತೆಕೆಲವೊಂದು ಪ್ರತಿಷ್ಠಿತ ಟೂರ್ನಿಗಳಲ್ಲಿ ಧೋನಿ ಪಡೆ ನಿರಾಸೆ ಅನುಭವಿಸಿದ್ದು ಉಂಟು. ಆದ್ರೆ ಈ ಸೋಲುಗಳನ್ನ ಸಾಲುಸಾಲುಗೆಲುವುಗಳು ಮರೆಮಾಚುವಂತೆ ಮಾಡಿದ್ದವು. ಇದ್ರಿಂದ ಧೋನಿಯ ನಾಯಕತ್ವಕ್ಕೆ ಅಷ್ಟೊಂದು ಎಫೆಕ್ಟ್ ಆಗಲಿಲ್ಲ.
ಈ ನಡುವೆ, ಧೋನಿಯ ನಾಯಕತ್ವಕ್ಕೆ ಗುರು ಗ್ಯಾರಿ ಕಸ್ಟರ್ನ್ ಮಾರ್ಗದರ್ಶನ ನೀಡಿದ್ರು. ಕೋಚ್ ಅನ್ನೋ ಅಹಂ ಬಿಟ್ಟು ಗೆಳೆಯನಂತೆ ಟೀಮ್ ಇಂಡಿಯಾ ಆಟಗಾರರ ತಪ್ಪುಗಳನ್ನ ಗ್ಯಾರಿ ಸರಿಪಡಿಸಿದ್ರು. ಪಬ್ಲಿಸಿಟಿಯಿಂದ ದೂರವೇ ಉಳಿದುಕೊಂಡ ಗ್ಯಾರಿ ಕಸ್ಟರ್ನ್ ಟೀಮ್ ಇಂಡಿಯಾದ ಯಶಸ್ಸಿಗಾಗಿ ಶ್ರಮಿಸಿದ್ರು.
ಸೋತಾಗ ಕುಗ್ಗದೆ, ಗೆದ್ದಾಗ ಬೀಗದೆ ಕೂಲ್ ಆಗಿಯೇ ಹ್ಯಾಂಡಲ್ ಮಾಡ್ತಾ ಇದ್ದ ಧೋನಿ 2011ರ ವಿಶ್ವಕಪ್ ಮೇಲೆ ಚಿತ್ತವನ್ನಿಟ್ಟಿದ್ರು. ಇದಕ್ಕೆಪೂರಕವಾಗಿಯೇ ಗುರು ಗ್ಯಾರಿ ಮಾಸ್ಟರ್ ಪ್ಲಾನ್ ಕೂಡ ಮಾಡ್ಕೊಂಡ್ರು. ಕೋಟಿ ಕೋಟಿ ಭಾರತೀಯ ಕನಸನ್ನ ಸಾಕಾರಗೊಳಿಸಲು ಟೀಮ್ ಇಂಡಿಯಾ ಕೂಡ ಪಣತೊಟ್ಟಿತ್ತು.
ವಿಶ್ವಕಪ್ ಟೂರ್ನಿಯ ಆರಂಭದ ಪಂದ್ಯಗಳಲ್ಲಿ ಧೋನಿ ಹುಡುಗರು ಸಾಧಾರಣ ಮಟ್ಟದ ಪ್ರದರ್ಶನ ನೀಡಿದ್ರು. ಆದ್ರೆ ನಾಕೌಟ್ ಹಂತದಲ್ಲಿ ಅದ್ಭುತ ಆಟವನ್ನಾಡಿ ಫೈನಲ್‌ಗೂ ಎಂಟ್ರಿಯಾಯ್ತು. ಫೈನಲ್‌ನಲ್ಲಿ ಲಂಕಾ ವಿರುದ್ಧ ಸೋಲಿನ ಭೀತಿಗೆ ಸಿಲುಕಿದಾಗ ಎಮ್.ಎಸ್. ಧೋನಿ ನಾಯಕನ ಆಟವನ್ನಾಡಿದ್ರು. ತನ್ನ ಅದ್ಭುತ ಬ್ಯಾಟಿಂಗ್‌ನಿಂದ ಲಂಕಾ ಕೈಯಿಂದ ಗೆಲುವನ್ನ ಕಸಿದುಕೊಂಡ ಧೋನಿ ಭಾರತೀಯರ ಹೀರೋ ಅದ್ರು. ವಿಶ್ವ ಕ್ರಿಕೆಟ್‌ನ ಗ್ರೇಟ್ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ರು. 28 ವರ್ಷಗಳ ವರ್ಷಗಳಿಂದ ಮರೀಚಿಕೆಯಾಗಿದ್ದ ವಿಶ್ವಕಪ್ ಟ್ರೋಫಿಯನ್ನ ಭಾರತಾಂಭೆಗೆ ಅರ್ಪಿಸಿದ್ರು.
ಆದ್ರೆ ವಿಶ್ವಕಪ್ ಗೆದ್ದ ನಂತ್ರ ಎಲ್ಲವೂ ಧೋನಿ ಅಂದುಕೊಂಡಂತೆ ಆಗ್ತಾ ಇಲ್ಲ. ತವರಿನಲ್ಲಿ ಆರ್ಭಟಿಸಿದ್ರೂ ವಿದೇಶಿ ನೆಲದಲ್ಲಿ ಮಂಕಾಗಿದ್ದಾರೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ವೈಟ್ ವಾಶ್ ಮಾಡ್ಕೊಂಡಿರುವುದು ಧೋನಿಯ ನಾಯಕತ್ವಕ್ಕೆ ಕಪ್ಪುಚುಕ್ಕೆಯಾಗಿದೆ. ಇದೀಗ ಧೋನಿಯ ನಾಯಕತ್ವದ ಬಗ್ಗೆ ಅಪಸ್ವರ ಕೇಳಿ ಬರ್ತಿದೆ. ಆದ್ರೆ ಧೋನಿಗೆ ಬಿಸಿಸಿಐ ಮತ್ತು ಆಯ್ಕೆ ಸಮಿತಿಯ ಅಭಯ ಇದೆ. ಇದ್ರಿಂದ ಸದ್ಯಕ್ಕಂತೂ ಧೋನಿ ನಾಯಕತ್ವದಿಂದ ಕೆಳಗಿಳಿಯುವುದಿಲ್ಲ. ಒಂದು ವೇಳೆ,ಸಾಲು ಸಾಲು ಸೋಲುಗಳು ಮತ್ತೆ ಆವರಿಸಿಕೊಂಡ್ರೆ ಸ್ವತಃ ಧೋನಿಯೇ ನಾಯಕತ್ವ ತ್ಯಜಿಸುತ್ತಾರೆ ಎಂಬದುರಲ್ಲಿ ಸಂದೇಹವೇ ಇಲ್ಲ.
ಏನೇ ಆದ್ರೂ ಭಾರತೀಯ ಕ್ರಿಕೆಟ್ ಇತಿಹಾಸವೇ ಅಂತಹುದ್ದು. ನಾಯಕನಾಗಿ ಮೆರೆದಾಡಿದವ್ರು ಕೊನೆಗೆ ಮೂಲೆಗುಂಪಾಗಿ ತೆರೆಮರೆಗೆ ಸೇರಿದ್ದಾರೆ. ಇದಕ್ಕೆ ಗಂಗೂಲಿ ಮತ್ತು ದ್ರಾವಿಡ್ ಜಸ್ಟ್ ಎಕ್ಸಾಂಪಲ್ ಅಷ್ಟೇ. ಮುಂದಿನ ದಿನಗಳಲ್ಲಿ ಧೋನಿ ಈ ಲೀಸ್ಟ್‌ಗೆ ಸೇರ್ಪಡೆಯಾಗುತ್ತಾರಾ ಅನ್ನೋದು ಸದ್ಯಕ್ಕಿರುವ ಕುತೂಹಲ.
ಸನತ್ ರೈ ಸ್ಪೋಟ್ರ್ಸ್ ಬ್ಯೂರೋ ಸಮಯ ನ್ಯೂಸ್ .
Subscribe to:
Post Comments (Atom)
No comments:
Post a Comment