ಇದು ಚಂದಮಾಮ ಕಥೆಯಲ್ಲ. ಬದುಕಿನಲ್ಲಿ ಅಂದುಕೊಂಡಿರುವುದನ್ನ ಸಾಧಿಸಿದವನ ಕಥೆ.
ಎಲ್ಲಾ ಸಾಧನೆಗಳನ್ನ ಒಂದು ಕ್ಷಣ ನೆನಪಿಸಿಕೊಂಡಾಗ ಅಬ್ಬಾ ಅನ್ಸುತ್ತೆ... ಆದ್ರೂ ಸಮಾಧಾನವಿಲ್ಲ. ತೃಪ್ತಿನೂ ಇಲ್ಲ. ಯಾಕಂದ್ರೆ ಇನ್ನೂ ಸಾಧಿಸಬೇಕು ಅನ್ನೋ ದಾಹ. ಜತೆಗೆ ತಾನು ಏನೋ ಮಿಸ್ ಮಾಡ್ಕೊಂಡಿದ್ದೇನೆ ಅನ್ನೋ ವೇದನೆ...ಹೀಗೆ ಬಹು ದಿನಗಳಿಂದ ಯೋಚನಾ ಲಯರಿಯಲ್ಲಿ ಮುಳುಗಿದ್ದ ಮಹಾನ್ ಸಾಧಕ
ಸಚಿನ್ ರಮೇಶ್ ತೆಂಡುಲ್ಕರ್.
ಕಳೆದ 22 ವರ್ಷಗಳಿಂದ ವಿಶ್ವ ಕ್ರಿಕೆಟ್‌ನಲ್ಲಿ ಸಾಮ್ರಾಟನಾಗಿ ಮೆರೆಯುತ್ತಿರುವ ಈ ವಾಮನ ಮೂರ್ತಿಯ ಕಿರೀಟದಲ್ಲಿ ವಿಶ್ವಕಪ್ ಗರಿಯೊಂದು ಇರಲಿಲ್ಲ. ಐದು ಬಾರಿ ವಿಶ್ವಕಪ್ ಅಶ್ವಮೇಧದಲ್ಲಿ ಹೋರಾಟ ನಡೆಸಿದ್ರೂ ಪ್ರತಿಫಲ ಮಾತ್ರ ಸಿಗಲಿಲ್ಲ. ಅದ್ರಲ್ಲೂ ಮೂರು ಬಾರಿ ವಿಶ್ವಕಪ್ ಹೋರಾಟವಂತೂ ಬಲು ದೂರದ ಬಾ ನೀಲಿಯ ಚೆಲುವೆಯಾಗಿ ಮರೆಯಾಗಿಬಿಟ್ಟಿತ್ತು. ಇನ್ನೂ ಎರಡು ಬಾರಿಯಂತೂ ಮಿನುಗುವ ವಿಶ್ವಕಪ್ ಟ್ರೋಫಿ ಕಣ್ಣಂಚಿನಲ್ಲೇ ಹೊಳೆದು ಮಾಯವಾಗಿತ್ತು.
ಆದ್ರೂ ಸಚಿನ್ ಧೃತಿಗೆಡಲಿಲ್ಲ. ವಿಶ್ವಕಪ್ ಮರೀಚಿಕೆಯೂ ಅಲ್ಲ.. ಗಗನ ಕುಸುಮವೂ ಅಲ್ಲ. ಗೆಲ್ಲಬೇಕು ಅಷ್ಟೆ.. 2011ರಲ್ಲಿ ತನ್ನ ವರ್ಣ ರಂಜಿತ ಕ್ರಿಕೆಟ್ ಬದುಕನ್ನ ಅರ್ಥಪೂರ್ಣವಾಗಿಸಿಕೊಳ್ಳಬೇಕು. ಒಂದು ವೇಳೆ ಈ ಅವಕಾಶವನ್ನ ಕೈಚೆಲ್ಲಿಕೊಂಡ್ರೆ ತನ್ನ ಸಾಧನೆ, ದಾಖಲೆ, ಯಶಸ್ಸಿಗೆ ಅರ್ಥನೇ ಇರೋಲ್ಲ ಅಂತ ಸಚಿನ್ ಕೂಡ ಭಾವಿಸಿದ್ರು. ಏನೇ ಆದ್ರೂ 2011ರ ವಿಶ್ವಕಪ್ ಗೆಲ್ಲೋದು ತೆಂಡುಲ್ಕರ್ ಅವ್ರ ಸಿಂಗಲ್ ಲೈನ್ ಅಜೆಂಡವಾಗಿತ್ತು.
ಹಾಗಂತ ವಿಶ್ವಕಪ್ ಗೆಲ್ಲುವುದು ಟೀಮ್ ಇಂಡಿಯಾಗೆ ಸುಲಭವೇನೂ ಇರಲಿಲ್ಲ. ಟೂರ್ನಿಯಲ್ಲಿ ಫೆವರೀಟ್ ಆಗಿದ್ರೂ ಕ್ರಿಕೆಟ್ ಆಟದಲ್ಲಿ ಏನೂ ಬೇಕಾದ್ರೂ ಆಗಬಹುದು. ಇದನ್ನೆಲ್ಲಾ ಅರಿತುಕೊಂಡಿರುವ ಮಾಸ್ಟರ್ ವಿಶ್ವಕಪ್‌ಗಾಗಿ ಮಾಸ್ಟರ್ ಪ್ಲಾನ್ ಮಾಡ್ಕೊಂಡಿದ್ರು. ಕಠಿಣ ಅಭ್ಯಾಸ ನಡೆಸಿದ್ರು. ವಿಶ್ರಾಂತಿ ಪಡೆದ್ರು. ದೈಹಿಕವಾಗಿ ಹಾಗೂ ಮಾನಸಿಕವಾಗಿಯೂ ರೆಡಿಯಾದ್ರು. ಆದ್ರೂ ಸಿಕ್ಕಾಪಟ್ಟೇ ಟೆನ್ಷನ್ ಇತ್ತು. ಯಾಕಂದ್ರೆ ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲಬೇಕು ಅನ್ನೋದು ದೇಶದ ಹೃದಯಬಡಿತವಾಗಿತ್ತು.
ಇನ್ನು, ಟೀಮ್ ಇಂಡಿಯಾದ ವಿಶ್ವಕಪ್ ಅಭಿಯಾನಕ್ಕೆ ಎಮ್. ಎಸ್. ಧೋನಿ ದಂಡನಾಯಕನಾದ್ರು. ತಂಡದ ಸಾರಥಿಯಾಗಿ, ಸೂತ್ರಧಾರಿಯಾದ ಸಚಿನ್ ಆರನೇ ವಿಶ್ವಕಪ್ ಅಶ್ವಮೇಧದಲ್ಲೂ ರನ್ ಮಳೆಯನ್ನೇ ಸುರಿಸಿದ್ರು. ಆದ್ರೆ ಫೈನಲ್ ಪಂದ್ಯದಲ್ಲಿ ಸಚಿನ್ ಬ್ಯಾಟ್‌ನಿಂದ ರನ್‌ಗಳು ಹರಿದು ಬರಲಿಲ್ಲ. ತವರು ಅಭಿಮಾನಿಗಳ ಎದುರು ನಿರಾಸೆಯಿಂದಲೇ ಪೆವಿಲಿಯನತ್ತ ಹೆಜ್ಜೆ ಹಾಕಿದ ಸಚಿನ್ ಮುಖದಲ್ಲಿ ಬೇಸರವಿತ್ತು. ಮತ್ತೆ ವಿಶ್ವಕಪ್ ಟ್ರೋಫಿ ಹೊಳೆಯುತ್ತಿರುವ ಗಿರಿವಜ್ರವಾಗುತ್ತಾ ಅನ್ನೋ ಭಾವನೆ ಮೂಡಿತ್ತು..
ಈ ನಡುವೆ, ಸಚಿನ್ ಆಸೆಯನ್ನು ಈಡೇರಿಸಲು ಧೋನಿ ಪಡೆಯ ಯುವಕರು ಟೊಂಕ ಕಟ್ಟಿನಿಂತಿದ್ರು. ಅದ್ರಲ್ಲೂ ಗಂಭೀರ್ ಮತ್ತು ಧೋನಿ ಕ್ರೀಸ್‌ಗೆ ಅಂಟಿಕೊಂಡು ಆಡ್ತಾ ಇದ್ರು. ಜತೆಗೆ ತಂಡವನ್ನ ಗೆಲುವಿನತ್ತಲೂ ಕೊಂಡೊಯ್ದರು. ಆದ್ರೂ ಇವ್ರ ಆಟವನ್ನ ನೋಡುವ ಮನಸ್ಸು ಸಚಿನ್‌ಗಿರಲಿಲ್ಲ. ಅಷ್ಟೇ ಯಾಕೆ ಗೆಲುವಿನ ರನ್‌ಗಾಗಿ ಸಿಕ್ಸ್ ಬಾರಿಸಿದಾಗಲೇ ಧೋನಿ ಕಣ್ಣಲ್ಲಿ ವಿಶ್ವಕಪ್ ಟ್ರೋಫಿ ಮಿನುಗಿತ್ತು. ವಿಜಯದ ಬಳಿಕ ಧೋನಿ ಬ್ಯಾಟ್ ಅನ್ನು ಗದೆಯಂತೆ ತಿರುಗಿಸುತ್ತಿದ್ರೆ, ಕ್ರಿಕೆಟ್ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ರು. ಅಂಗಣದಲ್ಲಿ ಟೀಮ್ ಇಂಡಿಯಾ ಆಟಗಾರರು ಗೆಲುವಿನ ಸಂಭ್ರಮದಲ್ಲಿ ತೇಲಾಡುತ್ತಿದ್ರು.
ಆದ್ರೂ ಸಚಿನ್‌ಗೆ ಇದ್ರ ಪರಿವೇ ಇರಲಿಲ್ಲ. ಯಾಕಂದ್ರೆ ಸಚಿನ್ ಡ್ರೆಸಿಂಗ್ ರೂಮ್‌ನ ಮೂಲೆಯೊಂದರಲ್ಲಿ ಧ್ಯಾನಕ್ಕೆ ಕುಳಿತಿದ್ರು. ನಂತ್ರ ಎಚ್ಚೆತ್ತುಕೊಂಡ ಮಾಸ್ಟರ್, ಪುಟ್ಟ ಮಗುವಿನಂತೆ ಓಡೋಡಿ ಅಂಗಣಕ್ಕೆ ಬಂದ್ರು. ತನ್ನ ಒಡನಾಡಿಗಳನ್ನ ಬಿಗಿದಪ್ಪಿಕೊಂಡ ಮಾಸ್ಟರ್‌ನ ಕಣ್ಣಲ್ಲಿ ಆನಂದಬಾಸ್ಪ ಸುರಿಯುತ್ತಿತ್ತು. ಹಿರಿಯಣ್ಣನನ್ನು ಹೆಗಲ ಮೇಲೆ ಕೂರಿಸಿಕೊಂಡು ಸಂಭ್ರಮಿಸಿದ ಟೀಮ್ ಇಂಡಿಯಾ ಹುಡುಗರ ಆ ಸಂತಸದ ಕ್ಷಣವನ್ನ ಬಣ್ಣಿಸಲು ಸಾಧ್ಯವಿಲ್ಲ.
ವಿಶ್ವಕಪ್ ಟ್ರೋಫಿಗೆ ಮನಬಂದಂತೆ ಚುಂಬಿಸಿದ ತೆಂಡುಲ್ಕರ್ ತನ್ನ ಕನಸನ್ನ ಸಾಕಾರಗೊಳಿಸಿಕೊಂಡ್ರು. ಹಾಗೇ ಕನಸಿನ ಮನೆಯ ಗೃಹ ಪ್ರವೇಶವನ್ನ ಈ ವರ್ಷವೇ ಮಾಡ್ಕೊಂಡ್ರು. ಮತ್ತೊಂದೆಡೆ ಐಪಿಎಲ್‌ನಲ್ಲಿ ನಿರಾಸೆ ಅನುಭವಿಸಿದ್ರೂ ಚಾಂಪಿಯನ್ಸ್ ಲೀಗ್ ಟಿ -ಟ್ವೆಂಟಿಯಲ್ಲಿ ಸಂಭ್ರಮಿಸಿದ್ರು. ಟೂರ್ನಿಯಲ್ಲಿ ಆಡದಿದ್ರೂ ಮುಂಬೈ ಇಂಡಿಯನ್ಸ್ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ರು.
ಆದ್ರೆ ವಿಶ್ವಕಪ್ ನಂತ್ರ ಸಚಿನ್ ಶತಕ ದಾಖಲಿಸಲು ಒದ್ದಾಟ ನಡೆಸ್ತಾ ಇದ್ದಾರೆ. ಉತ್ತಮ ಫಾರ್ಮ್‌ನಲ್ಲಿದ್ರೂ ಶತಕದ ಸನೀಹದಲ್ಲಿ ಜಾರಿಬೀಳ್ತಾ ಇದ್ದಾರೆ. ಐತಿಹಾಸಿಕ ನೂರನೇ ಶತಕ ದಾಖಲಿಸುವ ಕ್ಷಣವನ್ನ ಅಭಿಮಾನಿಗಳು ಕಳೆದ ಎಂಟು ತಿಂಗಳಿನಿಂದ ಎದುರು ನೋಡ್ತಾ ಇದ್ದಾರೆ. ಇದೀಗ ವರ್ಷಾಂತ್ಯದಲ್ಲಿ ಮತ್ತೊಂದು ಅವಕಾಶ ಸಿಕ್ಕಿದೆ. ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಮಹಾ ಶತಕ ಸಿಡಿಸಿದ್ರೆ ಅದಕ್ಕಿಂತ ಮಿಗಿಲಾದ ಸಾಧನೆ ಮತ್ತೊಂದಿಲ್ಲ.
ಒಟ್ಟಿನಲ್ಲಿ ಸಚಿನ್‌ಗೆ ಸರಿಸಾಟಿ ಯಾರು ಇಲ್ಲ. ಆದ್ರೂ ಸಚಿನ್ ಕೇವಲ ಪಾತ್ರಧಾರಿಯಷ್ಟೇ. ಅಣ್ಣ ಅಜಿತ್ ತೆಂಡುಲ್ಕರ್ ಈ ಕನಸುಗಾರನ ಸೂತ್ರಧಾರಿಯಾದ್ರು. ಗುರು ರಮಕಾಂತ್ ಆಚ್ರೇಕರ್ ಮಾರ್ಗದರ್ಶನದಿಂದ ತೆಂಡುಲ್ಕರ್ ಕ್ರಿಕೆಟ್ ಜಗತ್ತಿನ ಕಲಾವಿದರಾದ್ರು. ಅಪ್ಪ ರಮೇಶ್ ತೆಂಡುಲ್ಕರ್ ಲೇಖನಿಯಿಂದ ಬರೆದ ಅಕ್ಷರಮಾಲೆಗಳಂತೆ ಸಚಿನ್ ವಿಶ್ವ ಕ್ರಿಕೆಟ್‌ನಲ್ಲಿ ರನ್‌ಗಳ ಸುರಿಮಳೆಗೈದ್ರು. ಅಮ್ಮನ ಪ್ರೀತಿ ದೇಶ ಪ್ರೇಮಕ್ಕೆ ಸ್ಪೂರ್ತಿಯಾಯ್ತು. ಪತ್ನಿ ಅಂಜಲಿ ಯಶಸ್ಸಿಗೆ ಪ್ರೇರಣೆಯಾದ್ರು. ಇನ್ನು ಕೋಟಿ ಕೋಟಿ ಅಭಿಮಾನಿಗಳ ಅಭಿಮಾನದಿಂದ ವಿಶ್ವಕ್ರಿಕೆಟ್‌ನ ದೇವ್ರುರಾದ್ರು.
ಸನತ್ ರೈ
Sunday, January 1, 2012
Subscribe to:
Post Comments (Atom)
No comments:
Post a Comment