Thursday, December 2, 2010

ಕರಾವಳಿಯ ಚಿನ್ನದ ಚಿಗರೆ

ಕರಾವಳಿ ಹುಡುಗಿಯ ಮನೆಯಲ್ಲಿ ಹಬ್ಬದ ಸಂಭ್ಗ್ರಮ....ವರ್ಷದ ಬಳಿಕ ತವರಿಗೆ ಬಂದ ಖುಷಿ... ಕಾಮನ್‌ವೆಲ್ತ್‌, ಏಷ್ಯನ್‌ ಗೇಮ್ಸ್‌ ನಲ್ಲಿ ಚಿನ್ನದ ನಗೆ ಬೀರಿ ಜಗತ್ತಿನಾದ್ಯಂತ ಮನೆಮಾತಾದ ಅಶ್ವಿನಿ ಅಕ್ಕುಂಜೆಯನ್ನು ಇಡೀ ಊರಿಗೆ ಊರೇ ಆರತಿ ಎತ್ತಿ ಬರಮಾಡಿಕೊಂಡಿತ್ತು.
ತನ್ನ ಅಮೋಘ ಸಾಧನೆಯೊಂದಿಗೆ ಅಶ್ವಿನಿ ಅಕ್ಕುಂಜೆ ಗ್ರಾಮಕ್ಕೆ ಕಾಲಿಟ್ಟಾಗ ಗ್ರಾಮಸ್ಥರ ಸಂಭ್ರಮ ಮುಗಿಲು ಮುಟ್ಟಿತ್ತು. ಕಾಮನ್‌ವೆಲ್ತ್‌ ಮತ್ತು ಏಷ್ಯನ್‌ ಗೇಮ್ಸ್‌ ನಲ್ಲಿ ಚಿನ್ನ ಗೆದ್ದ ತಮ್ಮೂರಿನ ಹುಡುಗಿಗೆ ಅಭಿನಂದನೆ ಸಲ್ಲಿಸಿದ್ರು. ಮನೆ ಮಗಳಿಗೆ ಸನ್ಮಾನ ಮಾಡಿದ್ರು. ತವರಿನ ಸ್ವಾಗತ, ಅಭಿಮಾನಕ್ಕೆ ಅಶ್ವಿನಿ ಭಾವುಕರಾದ್ರು.
ಬದುಕಿನಲ್ಲಿ ಅಂದುಕೊಂಡಿದ್ದನ್ನ ಸಾಧಿಸಬೇಕು ಎಂಬ ಹಠಕ್ಕೆ ಬಿದ್ದ ಅಶ್ವಿನಿ ಮನೆಯವರಿಂದ ದೂರ ಉಳಿದ್ರು. ಮನೆಯಲ್ಲಿ ಬಡತನವಿದ್ರೂ ಅಕ್ಕುಂಜೆಯ ಪ್ರತಿಭೆಯಲ್ಲಿ ಬಡತನವಿರಲಿಲ್ಲ. ಕಠಿಣ ಶ್ರಮ, ಬದ್ಧತೆಯ ಮೂಲಕ ಯಶಸ್ಸು ಸಾಧಿಸಿದ್ರು. ಹಾಗಂತ ತವರಿನ ಒಡನಾಟ, ತಾನು ಹುಟ್ಟಿ ಬೆಳೆದ ಊರನ್ನು ಈಕೆ ಮರೆತಿಲ್ಲ.. ಅಲ್ಲಿನ ಬದುಕಿನ ತುಣುಕುಗಳು ಇನ್ನೂ ಅಶ್ವಿನಿಯ ಮನದಲ್ಲಿ ಸಿಹಿ ನೆನಪುಗಳಾಗಿ ಉಳಿದಿವೆ.
ಈ ನಡುವೆ ಆಶ್ವಿನಿ ಹಳೆಯ ದಿನಗಳಿಗೆ ಜಾರಿಕೊಂಡ್ರು... ಅಣ್ಣ, ಅಕ್ಕನ ಜತೆ ಓಡಾಡಿದ ಕ್ಷಣಗಳನ್ನ ನೆನಪಿಸಿಕೊಂಡ್ರು. ಅಜ್ಜನ ಜತೆಗಿನ ತರ್ಲೆಗಳು, ತನ್ನ ಕ್ರೀಡಾಬದುಕಿಗೆ ಅಪ್ಪ- ಅಮ್ಮ ನೀಡಿದ ಪ್ರೋತ್ಸಾಹ... ಬಡತನದ ಬೇಗೆಯಲ್ಲಿ ಅಮ್ಮ ಕೈ ಬಳೆಯನ್ನೇ ಅಡವಿಟ್ಟ ಕ್ಷಣಗಳು ಹೀಗೆ ತನ್ನ ಬದುಕಿನ ಕಷ್ಟದ ದಿನಗಳು ಒಂದು ಕ್ಷಣ ಕಣ್ಮುಂದೆ ಹಾದು ಹೋದವು. ಆದ್ರೆ ಈಗ ಅಶ್ವಿನಿಯ ಮುಖದಲ್ಲಿ ನೋವಿಲ್ಲ. ಜೀವನದಲ್ಲಿ ಯಶ ಸಾಧಿಸಿದ ಖುಷಿ ಇದೆ. ಹಾಗಂತ ತನ್ನ ಕಷ್ಟದ ದಿನಗಳನ್ನ ಮಾತ್ರ ಇನ್ನೂ ಮರೆತಿಲ್ಲ.
ಅಷ್ಟೇ ಅಲ್ಲ, ತಾನು ಓಡಾಡಿದ... ಅಭ್ಯಾಸ ಮಾಡುತ್ತಿದ್ದ ದಾರಿಯಲ್ಲೇ ಮತ್ತೆ ಓಡಾಡಿದ್ರು. ತನ್ನ ತಂದೆಯ ಜತೆ ಬಜಾಜ್‌ ಎಮ್‌ಐಟಿಯಲ್ಲಿ ಸವಾರಿ ಮಾಡಿ ಖುಷಿ ಪಟ್ರು,,. ಗದ್ದೆ, ತೋಟಗಳಲ್ಲಿ ಹಾದಿ ಮದ್ಯೆ ಸರ್ಕಸ್ ಮಾಡ್ತಾ ಎಂಜಾಯ್ ಮಾಡಿದ್ರು.. ಗೆಲುವಿನ ಉತ್ತುಂಗಕ್ಕೆ ಏರಿದ್ರೂ ತನ್ನ ನೆಲದ ಮಣ್ಣಿನ ಸೊಗಸನ್ನು ಆಸ್ವಾದಿಸೋ ಮುಗ್ಧ ಮನಸ್ಸಿನ ಭಾವವನ್ನು ವ್ಯಕ್ತಪಡಿಸಿದ್ರು..
ಹಾಗೇ ಅಶ್ವಿನಿ ದೇವರ ಮೇಲೆ ಅಪಾರ ನಂಬಿಕೆಯನ್ನಿಟ್ಟುಕೊಂಡಿದ್ದಾರೆ. ತನ್ನ ಸಾಧನೆಗೆಲ್ಲಾ ದೇವ್ರ ಆಶೀರ್ವಾದವೇ ಕಾರಣ ಅಂತಾರೆ ಅಶ್ವಿನಿ. ಮುಖ್ಯವಾಗಿ ಗ್ರಾಮದ ಸಿದ್ಧೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು. ಬಳಿಕ ಕಮಲಶಿಲೆಯ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಅಶ್ವಿನಿಯವರನ್ನ ಆತ್ಮೀಯವಾಗಿ ಬರಮಾಡಿಕೊಂಡಿತ್ತು. ಇದೇ ವೇಳೆ ದೇವಸ್ಥಾನದ ಆಡಳಿತ ಮೊಕ್ತೇಸರರು ಅಶ್ವಿನಿಗೆ ಚಿನ್ನದ ಹಾರ ಹಾಕಿ ಸನ್ಮಾನಿಸಿದ್ರು..
ಹೀಗೆ ಬಡತನದ ಹರ್ಡಲ್ಸ್ ದಾಟಿ ಚಿನ್ನ ಗೆದ್ದ ಹೆಮ್ಮೆಯ ಗ್ರಾಮೀಣ ಪ್ರತಿಭೆಗೆ ತನ್ನ ನೆಲದಲ್ಲಿ ಸಂದ ಗೌರವ ಇದು.. ಒಟ್ಟಿನಲ್ಲಿ ಕಲ್ಲು-ಮುಳ್ಳಿನ ಹಾದಿಯಲ್ಲಿ ಗೆಲುವಿನ ರುಚಿ ಕಂಡ ಅಶ್ವಿನಿ ಇನ್ನೂ ಎತ್ತರ ಎತ್ತರಕ್ಕೆ ಗೆಲುವಿನ ಉತ್ತುಂಗಕ್ಕೇರ್ಲಿ.. ಒಲಿಂಪಿಕ್ಸ್‌ ನಲ್ಲೂ ಪದಕ ಗೆದ್ದು ಬಾ ಮಗಳೆ ಅಂತ ಅಭಿಮಾನಿಗಳು ಹಾರೈಸಿದ್ರು. .
ಸನತ್ ರೈ

No comments:

Post a Comment