Saturday, December 25, 2010

ಗಾಡ್‌ ಆಫ್‌ ಕ್ರಿಕೆಟ್‌

ಅದು 22 ವರ್ಷಗಳ ಸುದೀರ್ಘ ಪಯಣ... ಸುಮಾರು 32 ವರ್ಷಗಳಿಂದ ಕ್ರಿಕೆಟ್ಟೇ ತನ್ನ ಉಸಿರು ಅಂತ ಅಂದುಕೊಂಡವನ ಯಶೋಗಾಥೆ ... ಬರೆದ ದಾಖಲೆಗಳಿಗೆ... ದಾಖಲಿಸಿದ ರನ್‌ಗಳಿಗೆ... ಸಿಡಿಸಿದ ಶತಕಗಳಿಗೆ ಲೆಕ್ಕವಿದ್ರೂ ಸುರಿದ ಬೆವರಿನ ಹನಿಗಳಿಗೆ ಮಾತ್ರ ಲೆಕ್ಕವಿಲ್ಲ... ಯಾಕಂದ್ರೆ ಅಲ್ಲಿ ಸಾಧಿಸಬೇಕು ಅನ್ನೋ ಕನಸುಗಾರನ ಹಠಮಾರಿತನವಿದೆ.
ಹೌದು, ಈ ಸೂಪರ್‌ ಮ್ಯಾನ್‌ನ ವರ್ಣರಂಜಿತ ಕ್ರಿಕೆಟ್‌ ಬದುಕೇ ಒಂದು ಸುಂದರ ಕಾವ್ಯ. ಎಲ್ಲಿಯೂ ಕಪ್ಪು ಚುಕ್ಕೆ ಇಲ್ಲ. ಎಲ್ಲವೂ ಫರ್ಫೆಕ್ಟ್‌...
ಮುಂಬೈನ ಶಿವಾಜಿ ಪಾರ್ಕ್‌ ಅಂಗಣದಲ್ಲಿ ಆಟವಾಡುತ್ತಾ ಬೆಳೆದ ಹುಡುಗ ಇಂದು ಕಿಂಗ್‌ ಆಫ್‌ ಕ್ರಿಕೆಟ್‌ .... ಅಭಿಮಾನಿ ದೇವ್ರುಗಳು ಪೂಜಿಸಿ ಆರಾಧಿಸುವ ಗಾಡ್‌ ಆಫ್‌ ಕ್ರಿಕೆಟ್‌.. ...ಕ್ರಿಕೆಟ್‌ ಧರ್ಮವಾಗಿರುವ ಭಾರತದಲ್ಲಿ ಸಚಿನ್ ತೆಂಡುಲ್ಕರ್‌ ಸಂತನೂ ಹೌದು. 22 ಯಾರ್ಡ್‌ನ ಆಟದ ಮೋಡಿಗಾರನಿಗೆ ಬೆಂಕಿಯಂತೆ ಉಗುಳುವ ಎಸೆತವೂ ಒಂದೇ.. .. ಬುಗುರಿಯಂತೆ ತೇಲಿ ಬರುವ ಮ್ಯಾಜಿಕ್‌ ಎಸೆತವೂ ಒಂದೇ.. .. ಎಲ್ಲದಕ್ಕೂ ಸಚಿನ್ ಅವ್ರ ಮಾಂತ್ರಿಕ ಬ್ಯಾಟ್‌ ನಲ್ಲಿ ಉತ್ತರ ಇರುತ್ತೆ .
ಜೀನಿಯಸ್‌ ಆಟಗಾರನ ಆಟಕ್ಕೆ ಮನ ಸೋಲದವ್ರು ಯಾರು ಇಲ್ಲ... ತೆಂಡುಲ್ಕರ್‌ ಕ್ರೀಸ್‌ಗಿಳಿದ್ರೆ ಸಾಕು ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ.. ದಾಖಲಿಸುವ ಪ್ರತಿ ರನ್‌ಗೂ ಅಭಿಮಾನದ ಕರಡಾತನವಿರುತ್ತೆ. ಇನ್ನೂ ಸಚಿನ್‌ ಬ್ಯಾಟ್‌ನಿಂದ ಸಿಡಿದ ಚೆಂಡು ಬುಲೆಟ್‌ನಂತೆ ಬೌಂಡ್ರಿ ಗೆರೆ ದಾಟುವುದನ್ನ ನೋಡುವುದೇ ಕಣ್ಣಿಗೆ ಹಬ್ಬ. ಅಷ್ಟೇ ಯಾಕೆ ವಾಮನಮೂರ್ತಿ ಬಾರಿಸುವ ಸಿಕ್ಸರ್‌ ಕೂಡ ಅಷ್ಟೇ ರೋಮಾಂಚನಗೊಳಿಸುತ್ತೆ. ಅಂತಹ ಅದ್ಭುತ ಶಕ್ತಿ ಸಚಿನ್‌ ಬ್ಯಾಟಿಂಗ್‌ನಲ್ಲಿದೆ.
ನಿಜಕ್ಕೂ ಕೋಟಿ ಕೋಟಿ ಭಾರತೀಯರ ಮನ ಸಚಿನ್‌ಗಾಗಿ ಮಿಡಿಯುತ್ತಿದೆ. ಪ್ರತಿ ಪಂದ್ಯದಲ್ಲೂ ಸಚಿನ್‌ ಶತಕ ದಾಖಲಿಸಬೇಕು ಅನ್ನೋ ಹಂಬಲವಿರುತ್ತೆ.. ಹೆಲ್ಮೆಟ್‌ ತೆಗೆದು, ಆಕಾಶವನ್ನು ದಿಟ್ಟಿಸಿ ನೋಡಿದ ಬಳಿಕ ಅಭಿಮಾನಿಗಳತ್ತ ಬ್ಯಾಟ್‌ ಬೀಸುವ ಆ ಮಹೋನ್ನತ ಕ್ಷಣಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ.
ಅದು ಸಚಿನ್‌ಗೂ ಗೊತ್ತು. ಆದ್ರೆ ಅದು ಎಲ್ಲ ಪಂದ್ಯಗಳಲ್ಲಿ ಆಗುವುದಿಲ್ಲ. ಆದ್ರೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ಐವತ್ತು ಬಾರಿ ಸಚಿನ್‌ ಅಭಿಮಾನಿಗಳ ಮನವನ್ನ ತಣಿಸಿರುವುದು ಮಾತ್ರ ನಿಜಕ್ಕೂ ಗ್ರೇಟ್‌.
ಅಷ್ಟಕ್ಕೂ ಸಚಿನ್‌ ಇನ್ನೂ ಕಲಿಯುವ ಮತ್ತು ಕಲಿಯುತ್ತಿರುವ ಕ್ರಿಕೆಟಿಗ. ಪಂದ್ಯದಿಂದ ಪಂದ್ಯಕ್ಕೆ ಪಕ್ವಗೊಳ್ಳುತ್ತಿರುವ ಆಟಗಾರ. ಯಶಸ್ಸಿನ ಉತ್ತುಂಗದಲ್ಲಿದ್ರೂ ಮಗುವಿನಂತಹ ಮುಗ್ದತೆ ಅವ್ರ ಮುಖದಲ್ಲಿ ಕಾಣಬಹುದು. ಎಷ್ಟೇ ಟೀಕೆ ಬಂದ್ರೂ ಮೌನವಾಗಿಯೇ ಉತ್ತರ ನೀಡುವ ಸೈಲೆಂಟ್‌ ಕಿಲ್ಲರ್‌. ಏನೇ ಆದ್ರೂ, ಸಚಿನ್‌ ತೆಂಡುಲ್ಕರ್‌ ಅವ್ರದ್ದು ಬತ್ತದ ದಾಹ... ಕ್ರಿಕೆಟ್‌ ಜಗತ್ತಿನ ಅನರ್ಘ್ಯ ರತ್ನಕ್ಕೆ ಸಲಾಂ.
ಸನತ್‌ ರೈ

No comments:

Post a Comment