Thursday, December 2, 2010

ಸಿಎಂ ಸಾಹೇಬ್ರೇ … ಸ್ವಲ್ಪ ಕೇಳ್ತೀರಾ...1

ಸಿಎಂ ಸಾಹೇಬ್ರೇ, ಈ ರಾಜ್ಯದ ಕ್ರೀಡಾ ಸಚಿವರು ಯಾರು..? ಅವ್ರು ಎಲ್ಲಿದ್ದಾರೆ..? ಏನು ಮಾಡ್ತಿದ್ದಾರೆ..? ಏಷ್ಯನ್‌ ಗೇಮ್ಸ್‌ನಲ್ಲಿ ರಾಜ್ಯದ ನಾಲ್ಕು ಕ್ರೀಡಾಪಟುಗಳು ಚಿನ್ನ ಹಾಗೂ ಒಬ್ರು ಕಂಚಿನ ಪದಕ ಗೆದ್ದಿದ್ದಾರೆ. ಇದು ಕ್ರೀಡಾ ಸಚಿವರಿಗೆ ಗೊತ್ತಾ..? ಆಟ್‌ಲೀಸ್ಟ್‌ ನಿಮಗಾದ್ರೂ ಗೊತ್ತಾ..? ಗೊತ್ತಿದ್ರೂ ನಿಮಗೆಲ್ಲಿದೆ ಟೈಮ್‌..? ಭೂ ಹಗರಣ, ಆ ಹಗರಣ.., ಈ ಹಗರಣ ಅಂತ ರಾಜಕೀಯ ದೊಂಬರಾಟದಲ್ಲಿ ಎಲ್ಲವನ್ನ ಮರೆತಂತಿದೆ. ಯಾಕ್‌ ಸಾರ್‌..? ನಮ್ಮ ಕ್ರೀಡಾಪಟುಗಳ ಮೇಲೆ ಅಷ್ಟೊಂದು ನಿರ್ಲಕ್ಷ್ಯ..?
ಆದ್ರೂ, ನೆನಪಿಟ್ಟುಕೊಳ್ಳಿ... ನಮ್ಮ ರಾಜ್ಯದ ಕ್ರೀಡಾಪಟುಗಳು ಗೆದ್ದಿದ್ದು ಅಂತಿಂಥ ಚಿನ್ನವಲ್ಲ. ಏಷ್ಯನ್‌ ಕ್ರೀಡಾಮೇಳದ ಪದಕಗಳು... ಅಲ್ಲಿ ಪದಕ ಗೆದ್ದಿರುವುದು, ರಾಜಕಾರಣಿಗಳು ಚುನಾವಣೆಯಲ್ಲಿ ಗೆದ್ದಂಗೆ ಅಲ್ಲ. ದುಡ್ಡು ಚೆಲ್ಲಿ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕಾಗಿ ಕಚ್ಚಾಟ ನಡೆಸಬಹುದು. ಒಂದಿಷ್ಟು ದುಡ್ಡುಮಾಡಬಹುದು. ಆದ್ರೆ ಇಲ್ಲಿ ಹಾಗಲ್ಲ...ಇಲ್ಲಿ ಕಠಿಣ ಶ್ರಮಕಷ್ಟೇ ಬೆಲೆ. ಜೀವದ ಹಂಗನ್ನೇ ಮರೆತು ಅಖಾಡಕ್ಕೆ ಧುಮುಕಿ ಪದಕ ಗೆಲ್ಲುವುದು ಎಷ್ಟು ಕಷ್ಟ ಅಂತ ಅದನ್ನು ಸಾಧಿಸಿದವರಿಗೆ ಮಾತ್ರ ಗೊತ್ತು.
ಆದ್ರೂ ನಮ್ಮ ಕ್ರೀಡಾಪಟುಗಳ ಮೇಲೆ ನಿಮಗೆ ಸ್ವಲ್ಪನೂ ಹೆಮ್ಮೆ ಇಲ್ವಾ..? ನಮ್ಮವರು ಚಿನ್ನ ಗೆದ್ದಿದ್ದಾರೆ.. ರಾಜ್ಯಕ್ಕೆ ಹೆಸರು ತಂದಿದ್ದಾರೆ. ಅವ್ರನ್ನ ಭೇಟಿ ಮಾಡಿ ಅಭಿನಂದನೆ ಸಲ್ಲಿಸಬೇಕು ಎಂಬ ಕನಿಷ್ಠ ಜ್ಞಾನವೂ ಇಲ್ವಾ..? ಇದಕ್ಕಾಗಿ ನಿಮ್ಮಲ್ಲಿ ಒಂದೈದು ನಿಮಿಷವೂ ಪುರುಸೊತ್ತೂ ಇಲ್ವಾ..?
ಬಿಡಿ ಸಾರ್‌, ನೀವು ತುಂಬಾನೇ ಬಿಝಿ...ಇವ್ರೆಲ್ಲಾ ಪದಕ ಗೆದ್ರೆ ನಿಮಗೇನಾಗಬೇಕಿದೆ.... ನಿಮಗೆ ಅಧಿಕಾರ ಮುಖ್ಯ... ಪಕ್ಷ ಮುಖ್ಯ... ಕುಟುಂಬ ಮುಖ್ಯ.. ಅಷ್ಟಕ್ಕೂ ಯಾರದೋ ಮನೆಯ ಹುಡುಗ-ಹುಡುಗಿಯರು ಕ್ರೀಡಾಲೋಕದಲ್ಲಿ ಸಾಧನೆ ಮಾಡಿದ್ರೆ ನಿಮಗೇನು ಲಾಭ ಇಲ್ಲಾ ಅಲ್ವಾ ಸಾರ್‌...
ತಪ್ಪು ತಿಳ್ಕೊಬೇಡಿ.. ನಿಮ್ಮ ಬಾಯಿ ಯಾವಾಗ್ಲೂ ಅಭಿವೃದ್ದಿಯ ಮಂತ್ರ ಪಠಿಸುತ್ತಲೇ ಇರ್ತದೆ. ಅದಕ್ಕಾಗಿಯೇ ಈ ಮಾತುಗಳು... ಆದ್ರೆ ನಮ್ಮ ರಾಜ್ಯದ ಕ್ರೀಡಾ ರಂಗ ಯಾವ ಪರಿಸ್ಥಿತಿಯಲ್ಲಿದೆ ಎಂಬುದು ನಿಮಗೆ ಗೊತ್ತಿದೆಯೋ ಇಲ್ವೋ.. ಬಜೆಜ್‌ನಲ್ಲಿ ಕೋಟಿ ಕೋಟಿ ಹಣವನ್ನ ಬೇರೆ ಬೇರೆ ಕ್ಷೇತ್ರಗಳಿಗೆ ಮೀಸಲಿಡುತ್ತೀರಿ. ಮಠಗಳಿಗೆ ಅದೆಷ್ಟೋ ಹಣ ಹಂಚಿದ್ದೀರಿ. ಆದ್ರೆ ಕ್ರೀಡೆಗೆ ಎಷ್ಟು ಕೊಟ್ಟಿದ್ದೀರಾ..? ಹಾಗಂತ ಹಿಂದಿನ ಸರ್ಕಾರ ಎಷ್ಟು ಕೊಟ್ಟಿದೆ ಅಂತ ಕೇಳೋಕೆ ಹೋಗ್ಬೇಡಿ...ನೀವೇನೂ ಮಾಡಿದ್ದೀರಾ..ಅಂತ ನೋಡಿ. ರಾಜ್ಯದ ಕ್ರೀಡಾಂಗಣಗಳು... ಕ್ರೀಡಾ ಇಲಾಖೆ ಯಾವ ಸ್ಥಿತಿಯಲ್ಲಿದೆ ಎಂಬುದನ್ನ ನೀವೇ ಖುದ್ದಾಗಿ ಭೇಟಿ ಮಾಡಿದ್ರೆ ಗೊತ್ತಾಗುತ್ತೆ...
ಅಷ್ಟಕ್ಕೂ ಏಷ್ಯನ್‌ಗೇಮ್ಸ್‌ನಲ್ಲಿ ಪದಕ ಗೆದ್ದಿದ್ದಾರಲ್ಲ.. ಅವ್ರೆಲ್ಲಾ ಶ್ರೀಮಂತರಲ್ಲ. ಬಡತನದ ಬೇಗೆಯಲ್ಲಿ ಅರಳಿದ ಪ್ರತಿಭೆಗಳು. ಅವ್ರ ಯಶಸ್ಸಿನ ಹಿಂದೆ ಹೆತ್ತವರ ಬೆವರಿನ ಹನಿ ಇದೆ. ಆದ್ರೂ ನೀವೂ ದೊಡ್ಡವರು. ಪದಕ ಗೆದ್ದವರ ಸಾಧನೆ-ಪರಿಶ್ರಮಕ್ಕೆ ತಕ್ಕ ಪ್ರತಿಫಲ ನೀಡಬೇಕಿತ್ತು. ಅದು ಬಿಡಿ, ಬೆನ್ನಾದ್ರೂ ತಟ್ಟುವ ದೊಡ್ಡತನವನ್ನ ತೋರಲಿಲ್ಲ.
ಹಾಗಂತ ಪದಕ ಗೆದ್ದವರು ನಿಮ್ಮ ಶಾಸಕರಂತೆ ಬೇಡಿಕೆಯನ್ನಿಟ್ಟಿಲ್ಲಾ. ಬದುಕು ಸಾಗಿಸಲು ಕೆಲಸ ಅಷ್ಟೇ.. ಇನ್ನು ‘ಜಿ’ ಕೆಟಗೆರಿ ಸೈಟ್‌ ಅಂತೂ ಕೇಳಲೇ ಇಲ್ಲಾ ಬಿಡಿ ಸಾರ್‌... ಇದನ್ನೂ ನಿಮಗೆ ಕೊಡೋಕೆ ಆಗದಿದ್ರೆ ನಮ್ಮ ಕ್ರೀಡಾಪಟುಗಳು ಬೇರೆ ರಾಜ್ಯಕ್ಕೆ ವಲಸೆ ಹೋಗುವುದನ್ನ ತಪ್ಪಿಸೋಕೆ ಆಗೋಲ್ಲ. ಆದ್ರೂ ನೀವು ಹಂಗೆಲ್ಲಾ ಮಾಡೋಕೆ ಬಿಡಬೇಡಿ ಸಾರ್‌... ರೆಸಾರ್ಟ್ ರಾಜಕೀಯ... ಅಪರೇಷನ್‌ ಎಮ್‌ಎಲ್‌ಎ... ಅದೆನೇನೋ ಮಾಡ್ತಾರಲ್ಲ... ಅದಕ್ಕೆಲ್ಲಾ ಕಡಿವಾಣ ಹಾಕಿ ನಮ್ಮ ಕ್ರೀಡಾಪಟುಗಳಿಗೆ ದಯವಿಟ್ಟು ಪ್ರೋತ್ಸಾಹ ಕೊಡಿ ಸಾರ್‌.

ವಂದನೆಗಳು
ಸನತ್ ರೈ

No comments:

Post a Comment