ಕೆಲವೊಂದು ಸಲ ನಂಬಿಕೆ- ವಿಶ್ವಾಸಕ್ಕೆ ಅರ್ಥನೇ ಇರೋಲ್ಲ... ನಮ್ಮವರು ಅಂತ ಅಂದುಕೊಳ್ಳುವುದು ಭ್ರಮೆಯಾಗಿರುತ್ತೆ. ಅದ್ರಲ್ಲೂ ಆಪ್ತ ಸ್ನೇಹಿತರು ಮನಸ್ಸಿಗೆ ಚೂರು ನೋವು ಮಾಡಿದ್ರೂ ಆಗುವ ವೇದನೆ ಅಷ್ಟಿಷ್ಟಲ್ಲ. ಸ್ನೇಹಿತರು ಅಂದ ಮೇಲೆ ಕೋಳಿ ಜಗಳ ಸಹಜ. ಆದ್ರೆ ಅದು ಪದೇ ಪದೇ ರಿಪೀಟ್ ಆದಾಗ ಅಲ್ಲಿ ಮಾತು ಇರುವುದಿಲ್ಲ.. ಬರೀ ಮೌನವೇ ಉತ್ತರವಾಗಿರುತ್ತೆ. ಆಗ ಅಲ್ಲಿ ನೆನಪಾಗುವುದು ಫ್ಲಾಷ್ ಬ್ಯಾಕ್‌ಗಳು.
ಹೌದು, ಮನಸ್ಸಿಗೆ ತುಂಬಾ ಹತ್ತಿರವಾದವ್ರು ಸಡನ್ ಆಗಿ ದೂರವಾದಾಗ ಬೇಜಾರು ಆಗೋದು ಸಹಜ... ಸ್ನೇಹ, ಪ್ರೀತಿ, ನಂಬಿಕೆಗಳಿಗೆ ಬೆಲೆನೇ ಇಲ್ಲ ಅಂತ ಭಾಸವಾಗುತ್ತೆ. ಆಗ ಬರುತ್ತೆ ಸಿಟ್ಟು... ಮತ್ಸರ ..ದ್ವೇಷದ ಭಾವನೆಗಳು.. ಆಗ ಮನಸ್ಸು ಕಂಟ್ರೋಲ್‌ನಲ್ಲಿರುವುದಿಲ್ಲ. ಅಲೆಯಂತೆ ಮೂಡುವ ಚಿತ್ರ ವಿಚಿತ್ರ ಭಾವನೆಗಳು ಮನಸ್ಸನ್ನ ಮತ್ತಷ್ಟು ಘಾಸಿಗೊಳಿಸುತ್ತವೆ.
ಅಷ್ಟಕ್ಕೂ ನಾನ್ಯಾಕೆ ಇನ್ನೊಬ್ಬರನ್ನ ಅಷ್ಟೊಂದು ಹಚ್ಚಿಕೊಳ್ಳಬೇಕು... ಅವ್ರ ಜತೆ ಯಾಕೆ ಆತ್ಮೀಯತೆ.. ಸಲುಗೆಯಿಂದಿರ ಬೇಕು..ನನಗೂ ಅವ್ರಿಗೂ ಏನು ಸಂಬಂಧ.. ಅವ್ರಿಂದ ನನಗೆ ಏನು ಆಗಬೇಕು.. ನನ್ನಿಂದ ಅವ್ರಿಗೆ ಏನು ಆಗಬೇಕು...ಕೊನೆಗೆ ನಾನ್ಯಾರು ಹೀಗೆ ನಾನಾ ರೀತಿಯ ಪ್ರಶ್ನೆಗಳು ಮೂಡುತ್ತವೆ. ಆದ್ರೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಮಾತ್ರ ಬರೀ ಶೂನ್ಯ.
ಯಾಕಂದ್ರೆ ಇದು ಕೇವಲ ನಮ್ಮ ಭ್ರಮೆಯಷ್ಟೇ... ನಮ್ಮನ್ನು ನಾವೇ ಕಲ್ಪಿಸಿಕೊಳ್ಳುವುದರಿಂದ ಮನಸ್ಸು ಕೂಡ ಚಂಚಲವಾಗುತ್ತೆ. ಹಾಗಂತ ಎಲ್ಲಾ ಘಟನೆಗಳು ಹಿಂಗೇ ಇರಬೇಕು ಅಂತ ಏನಿಲ್ಲ. ಅದರಲ್ಲೂ ನಮ್ಮನ್ನು ತುಂಬಾ ಅರ್ಥ ಮಾಡ್ಕೊಂಡವ್ರು.. ತುಂಬಾನೇ ಸನೀಹದಲ್ಲಿರುವವರ ಮೇಲೆ ನಾವು ತುಂಬಾನೇ ನಿರೀಕ್ಷೆಗಳನ್ನಿಟ್ಟುಕೊಳ್ಳುತ್ತೇವೆ. ಆದ್ರೆ ಆ ಭಾವನೆಗಳು ಅವ್ರಲ್ಲಿ ಇಲ್ಲ ಅಂತ ನಮ್ಮ ಮನಸ್ಸಿಗೆ ಗೊತ್ತಾದಾಗ ನಮ್ಮ ನಿರೀಕ್ಷೆಗಳು ಹುಸಿಯಾಗುತ್ತವೆ. ನಂಬಿಕೆ, ವಿಶ್ವಾಸ, ಪ್ರೀತಿ ಎಲ್ಲವೂ ವ್ಯರ್ಥ ಅಂತ ಅನ್ಸುತ್ತೆ. ವರ್ಷಗಳ ಒಡನಾಟಕ್ಕೆ ಅರ್ಥವಿಲ್ಲ.. ನೋವು- ನಲಿವುಗಳನ್ನ ಹಂಚಿಕೊಂಡ ಕ್ಷಣಗಳು ಬರೀ ಪ್ರಹಸನ ಅಂತ ಭಾಸವಾಗುತ್ತೆ.
ಬಹುಶಃ ಇದಕ್ಕೆ ಪೊಸಸಿವ್‌ನೆಸ್ ಕೂಡ ಕಾರಣವಾಗಿರಬಹುದು. ನಮ್ಮ ಸಂಬಂಧಗಳಿಗೆ ಚ್ಯುತಿಯಾಗುತ್ತೆ ಅನ್ನೋ ಭಯ...ನಮಗಿಂತ ಒಳ್ಳೆಯ ಹಿತೈಸಿಗಳು, ಸ್ನೇಹಿತರು ಸಿಗ್ತಾರೆ.. ಅವ್ರ ಜತೆ ಚೆನ್ನಾಗಿರುತ್ತಾರೆ ಅನ್ನೋ ಮತ್ಸರವಿರುತ್ತೆ. ಇದು ಸ್ವಾರ್ಥವಾದ್ರೂ, ಎಲ್ಲೋ ಒಂದು ಕಡೆ ನಮ್ಮತನವನ್ನ ಕಳೆದುಕೊಂಡ ಆತಂಕವಿರುತ್ತೆ. ಆಗ ಯಾರ ಸಹವಾಸನೂ ಬೇಡ.. ಅನ್ನೋ ಕೊರಗಿನಲ್ಲಿ ಒಂಟಿತನದ ಮೊರೆ ಹೋಗುತ್ತೇವೆ. ಮನಸ್ಸು ಮರ್ಕಟದಂತೆ ಒದ್ದಾಡುತ್ತಾ ಇರುತ್ತೆ.. ನನ್ನವರು ಯಾರು ಇಲ್ಲ.. ಯಾರಿಗೂ ಯಾರು ಇಲ್ಲ ಅಂತ ಭಾಸವಾಗುತ್ತೆ...
ಸನತ್ ರೈ
Sunday, December 26, 2010
Subscribe to:
Post Comments (Atom)
No comments:
Post a Comment