Thursday, December 2, 2010

ಇದು ಕಥೆಯಲ್ಲ... ರಾಜ್ಯ ಕ್ರೀಡಾರಂಗದ ವ್ಯಥೆ

ಅಯ್ಯೋ ದೇವ್ರೆ.. ಇದು ಕಥೆಯಲ್ಲ.. ವ್ಯಥೆ.. ನಮ್ಮ ರಾಜ್ಯ ಕ್ರೀಡಾಪಟುಗಳ ವೇದನೆ. ಆದ್ರೆ, ಡಿ ನೋಟಿಫಿಕೇಷನ್‌, ಕೆಐಎಡಿಬಿ.. ಗಣಿ ಧೂಳ್‌.. ಆ ಡೀಲ್‌, ಈ ಡೀಲ್ ಅಂತ ನೂರಾರು ಸೈಟ್‌ ಗಳನ್ನ ನುಂಗಿ ಹಾಕಿರುವ ನಮ್ಮ ರಾಜಕಾರಣಿಗಳಿಗೆ ನಮ್‌ ಕ್ರೀಡಾ ಪಟುಗಳ ನೋವು ಹೆಂಗೆ ಅರ್ಥವಾಗಬೇಕು.
ಅಷ್ಟಕ್ಕೂ ಇದು ಏಷ್ಯನ್‌ ಕಂಚಿನ ವಿಜೇತೆ ಪ್ರಮೀಳಾ ಅಯ್ಯಪ್ಪ ಒಬ್ರ ನೋವಿನ ಕೂಗಲ್ಲ. ಇವ್ರೊಂದಿಗೆ ಸಾಕಷ್ಟು ರಾಜ್ಯದ ಕ್ರೀಡಾಪಟುಗಳಿದ್ದಾರೆ. ಹೆಸರಿಗೆ ಕ್ರೀಡಾ ಹಾಸ್ಟೆಲ್‌ಗಳಿದ್ರೂ ಅಲ್ಲಿ ಮಾರ್ಗದರ್ಶನದ ಕೊರತೆ ಇದೆ. ಸೂಕ್ತ ತರಬೇತುದಾರರಿಲ್ಲದೆ ಅರಳುವ ಪ್ರತಿಭೆಗಳು ಕಮರಿ ಹೋಗ್ತಾ ಇವೆ. ಅಷ್ಟೊಂದು ಶೋಚನೀಯ ಸ್ಥಿತಿಯಲ್ಲಿದೆ ಕರ್ನಾಟಕದ ಕ್ರೀಡಾರಂಗ.
ಕ್ರೀಡಾ ಅಭಿವೃದ್ದಿಗೆ ಕ್ರೀಡಾ ಇಲಾಖೆ ಇದ್ರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ. ಗೆದ್ದಾಗ ಮಾತ್ರ ಬೆನ್ನು ತಟ್ಟುವ ರಾಜ್ಯ ಒಲಿಂಪಿಕ್‌ ಸಂಸ್ಥೆ ಏನೂ ಮಾಡ್ತಿದೆ ಎಂಬುದು ಅಧಿಕಾರದ ದಾಹ ಹಿಡಿದವರಿಗೆ ಗೊತ್ತು. ಅಷ್ಟೇ ಅಲ್ಲ, ರಾಜ್ಯದ ಪ್ರತಿ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಪ್ರತಿಯೊಂದು ವಿಭಾಗದ ಕ್ರೀಡಾಸಂಸ್ಥೆಗಳಿವೆ. ಆದ್ರೆ ಆ ಸಂಸ್ಥೆಗಳು ಯಾವ ರೀತಿ ಕಾರ್ಯನಿರ್ವಹಿಸುತ್ತಿವೆ ಎಂಬುದು ಆ ಪರಮತ್ಮಾನಿಗೆ ಮಾತ್ರ ಗೊತ್ತು.
ಇನ್ನು, ಬೇರೆ ರಾಜ್ಯಕ್ಕೆ ಹೋಲಿಸಿದ್ರೆ ಕರ್ನಾಟಕದಲ್ಲಿ ಕ್ರೀಡಾರಂಗಕ್ಕೆ ಸೂಕ್ತ ಪ್ರೋತ್ಸಾಹವೇ ಸಿಗ್ತಾ ಇಲ್ಲ. ವರ್ಷಕ್ಕೊಂದು ರಾಜ್ಯ ಪ್ರಶಸ್ತಿ, ಏಕಲವ್ಯ ಪ್ರಶಸ್ತಿ, ರಾಜ್ಯ ಒಲಿಂಪಿಕ್‌ ಪ್ರಶಸ್ತಿ ಬಿಟ್ರೆ ಕ್ರೀಡಾಪಟುಗಳ ಸಾಧನೆಯನ್ನು ಕೇಳುವವರೇ ಇಲ್ಲ. ಅಷ್ಟಕ್ಕೂ ನಮ್ಮ ರಾಜ್ಯದಲ್ಲಿ ಕ್ರೀಡಾ ಪಾಲಿಸಿಯನ್ನ ಜಾರಿಗೊಳಿಸಬೇಕು ಎಂಬ ಹಲವು ವರ್ಷಗಳ ಕೂಗು ಇನ್ನೂ ಪ್ರತಿ ಧ್ವನಿಸುತ್ತಲೇಇದೆ.
ಈಗಾಗಲೇ ಹರಿಯಾಣ, ಜಾರ್ಕಂಡ್‌, ಆಂಧ್ರ ಪ್ರದೇಶ, ಗುಜರಾತ್‌, ತಮಿಳುನಾಡು, ಕೇರಳ ಪಂಜಾಬ್‌ ರಾಜ್ಯಗಳಲ್ಲಿ ಕ್ರೀಡಾಪಟುಗಳಿಗೆ ರಾಜ ಮರ್ಯಾದೆ ಇದೆ. ಜತೆಗೆ ಕ್ರೀಡಾ ಪ್ರತಿಭೆಗಳನ್ನ ಗುರುತಿಸಲು ವಿಶೇಷ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿವೆ. ಮತ್ತೊಂದೆಡೆ, ಪದಕ ಗೆದ್ದ ಕ್ರೀಡಾಪಟುಗಳಿಗೆ ಬಂಪರ್‌ನಗದು ಬಹುಮಾನ ನೀಡಿ ಪ್ರೋತ್ಸಾಹ ನೀಡ್ತಾ ಇದೆ.
ಆದ್ರೆ ನಮ್ಮಲ್ಲಿ ಕೇವಲ ಆಶ್ವಾಸನೆಗಳು ಮಾತ್ರ ಕೇಳಿಬರ್ತಿವೆ. ಇಲ್ಲಿ ನಿಜವಾದ ಸಾಧಕರಿಗೆ ಬೆಲೆ ಇಲ್ಲ. ಕಷ್ಟ ಪಟ್ಟು ಯಶ ಸಾಧಿಸಿದವರ ಬದುಕು ಆತಂತ್ರ ಸ್ಥಿತಿಯಲ್ಲಿದೆ. ರೆಸಾರ್ಟ್ನಲ್ಲಿ ಕೂತ್ಕೊಂಡು ರಾಜಕೀಯ ಲೆಕ್ಕಾಚಾರ ಹಾಕುತ್ತಿರುವ ಜನ ನಾಯಕರು ಕ್ರೀಡಾಭಿವೃದ್ದಿಯತ್ತ ಸ್ವಲ್ಪ ಯೋಚನೆ ಮಾಡಿದ್ರೆ ಕರುನಾಡಿಗೆ ಇನ್ನಷ್ಟು ಪದಕ ಗೆಲ್ಲುವ ಕ್ರೀಡಾಪಟುಗಳ ಉದಯವಾಗಬಹುದು.
ಸನತ್‌ ರೈ

No comments:

Post a Comment