ಇದು ಕ್ರಿಕೆಟ್ ಲೋಕದ ಮಹಾ ಕಾವ್ಯ...ಹಾಗಂತ ಕಲ್ಪನೆಯಲ್ಲ.. ಆದ್ರೆ ಕಲ್ಪನೆಗೂ ಸ್ಪಂದಿಸುವ ಜೊತೆಗೆ ಅದನ್ನೂ ಮೀರಿಸುವ ಆಟದ ಚಿತ್ತಾರ.. ಇದಕ್ಕೆ ಅಪಾರ ನಿರೀಕ್ಷೆಗಳನ್ನ ಗರಿಗೆದರುವಂತೆ ಮಾಡುವ ತಾಕತ್ ಇದೆ... ಟೀಕೆಗಳಿಗೆ ಉತ್ತರ ನೀಡುವ ಧಮ್ ಇದೆ… ಧುಮ್ಮಿಕ್ಕುವ ಜಲಪಾತದ ಭೋರ್ಗರೆತವೂ ಇದೆ... ಒಂದೇ ಏಟಿಗೆ ಅಪೋಶನ ತೆಗೆದುಕೊಳ್ಳುವ ಸುನಾಮಿಯ ಅಬ್ಬರವೂ ಇದೆ.. ಹಾಗೇ, ನೀಲ ಸಮುದ್ರದ ನಡುವಿನ ಶಾಂತಿಯೂ ಇದೆ. ಹೌದು..ಇದು ದೇವ್ರ ಆಟ.. ವಾಮನ ಮೂರ್ತಿಯ ತ್ರಿವಿಕ್ರಮವತಾರ...
…
ಸಚಿನ್ ರಮೇಶ್ ತೆಂಡುಲ್ಕರ್
ಈ ಆಟವನ್ನ ಬಣ್ಣಿಸಲು ಪದಪುಂಜಗಳು ಸಾಕಾಗೋದಿಲ್ಲ...ನಿಜ, ಈ ಜೀನಿಯಸ್ ಆಟಗಾರನ ಆಟದಲ್ಲಿ ಅಂತಹುದೊಂದು ಮಾಂತ್ರಿಕ ಸ್ಪರ್ಶವಿದೆ. ಇಲ್ಲಿ ಕೈಗೆಟುಕದ ಭಾವನೆಗಳ ಆಕರ್ಷಣೆ ಇದೆ...ಸಚಿನ್ ಅವ್ರ ಬ್ಯಾಟಿಂಗ್ ವೈಭವದ ಎದುರು ಭವಿಷ್ಯವೆಲ್ಲಾ ಮಸುಕು.. ಕ್ರಿಕೆಟ್ ದಾಖಲೆಗಳೆಲ್ಲಾ ಸದ್ಯ ವರ್ತಮಾನ.. ಮುಂದೆ ಅದೆಲ್ಲಾ ಭೂತಕಾಲದ ಗತ ವೈಭವ..
ಕ್ರಿಕೆಟ್.. ತನ್ನ ಬದುಕು ಅಂತ ಸಚಿನ್ ನಂಬಿಕೊಂಡಿದ್ದಾರೆ. ಆದ್ರೆ ಅಭಿಮಾನಿ ದೇವ್ರುಗಳು ಸಚಿನ್ ತಮ್ಮ ಉಸಿರು ಅಂತ ಭಾವಿಸಿಕೊಂಡೇ ಪೂಜೆ ಮಾಡ್ತಿದ್ದಾರೆ. ಹಾಗಂತ ತೆಂಡುಲ್ಕರ್ ಪವಾಡ ಪುರುಷ ಅಲ್ಲ.. ಆದ್ರೂ ಕ್ರಿಕೆಟ್‌ನಲ್ಲಿ ಪವಾಡ ಮಾಡಿದ್ದಾರೆ... ಮಾಡ್ತಾ ಇದ್ದಾರೆ. ಇದ್ರಿಂದ ಪ್ರತಿ ಪಂದ್ಯದಲ್ಲೂ ಸಚಿನ್ ಮೇಲೆ ಅಭಿಮಾನಿಗಳ ಆಪೇಕ್ಷೆ ಜಾಸ್ತಿಯಾಗಿರುತ್ತೆ. ಹಾಗೇ, ಅಭಿಮಾನಿಗಳ ಆಪೇಕ್ಷೆಗಳನ್ನ ಈಡೇರಿಸಲು ಸಚಿನ್ ಪಡುವ ಕಷ್ಟ ಅಷ್ಟಿಷ್ಟಲ್ಲ..ಅದಕ್ಕಾಗಿ ಲೆಕ್ಕವಿಲ್ಲದಷ್ಟು ಬೆವರು ಸುರಿಸ್ತಾರೆ.....
ಆದ್ರೂ ತೆಂಡುಲ್ಕರ್ ಈಗ ನೂರನೇ ಮಹಾಶತಕಕ್ಕಾಗಿ ಒದ್ದಾಡುತ್ತಿದ್ದಾರೆ. ಆದ್ರೆ, ತಾನು ಅಂದುಕೊಂಡಿದ್ದನ್ನ ಸಾಧಿಸಿ ತೋರಿಸುವುದು ಸಚಿನ್ ಜಾಯಮಾನ. ಇದ್ರಿಂದ ನೂರನೇ ಶತಕ ತಡವಾದ್ರೂ ಇತಿಹಾಸ ಪುಟ ಸೇರುತ್ತೆ ಅನ್ನೋದರಲ್ಲಿ ಅನುಮಾನ ಬೇಡ.
ಇನ್ನು, 2011ರ ವಿಶ್ವಕಪ್ ಗೆದ್ದಾಗಂತೂ ತೆಂಡುಲ್ಕರ್ ಅವ್ರ ಸಡಗರಕ್ಕೆ ಪಾರವೇ ಇರಲಿಲ್ಲ.. ಪುಟ್ಟ ಮಗುವಿನಂತೆ ಓಡೋಡಿ ಬಂದು, ಸಹ ಆಟಗಾರರನ್ನ ಬಿಗಿದಪ್ಪಿಕೊಂಡ ದೃಶ್ಯಗಳನ್ನ ನೋಡಿದಾಗ ನಮಗೆ ಗೊತ್ತಿಲ್ಲದೆ ಕಣ್ಣಂಚಿನಲ್ಲಿ ನೀರು ಬರುತ್ತೆ.
ನಿಜ, ಈ ಅಮೃತಗಳಿಗೆಗೆ ಸಚಿನ್ 22 ವರ್ಷ ಕಾಯಬೇಕಾಯ್ತು. ಶಬರಿ ಶ್ರೀರಾಮನಿಗೆ ಕಾದಂತೆ ವಿಶ್ವಕಪ್ ಟ್ರೋಫಿಗೆ ಮುತ್ತಿಡಲು ಸಚಿನ್ ತೆಂಡುಲ್ಕರ್ ಆರನೇ ಬಾರಿ ವಿಶ್ವಕಪ್ ಆಡಬೇಕಾಯ್ತು. ಗೆದ್ದೆ ಗೆಲ್ಲಬೇಕು ಎಂಬ ಆಸೆ, ಹಠದಲ್ಲಿದ್ದ ಸಚಿನ್‌ಗೆ ಧೋನಿ ಹುಡುಗರು ನಿರಾಸೆಗೊಳಿಸಲಿಲ್ಲ. ಕೊಟ್ಟ ಮಾತಿನಂತೆ ಕ್ರಿಕೆಟ್ ದೇವ್ರ ಮುಕುಟಕ್ಕೆ ವಿಶ್ವಕಪ್ ಗರಿಯನ್ನ ಮುಡಿಸಿದ್ರು. ಮಿನುಗುವ ಟ್ರೋಫಿಗೆ ಮನ ಬಂದಂತೆ ಚುಂಬಿಸಿದ ಮಾಸ್ಟರ್ ತಮ್ಮ ವರ್ಣ ರಂಜಿತ ಕ್ರಿಕೆಟ್ ಬದುಕನ್ನ ಸಾರ್ಥಕವನ್ನಾಗಿಸಿಕೊಂಡ್ರು.
ಅಂದ ಹಾಗೇ, ಇದು, ಸುಮಾರು 32 ವರ್ಷಗಳ ಹಿಂದಿನ ಸತ್ಯ ಕಥೆ. .. ಬ್ಯಾಟ್‌ಗಿಂತ ಸ್ವಲ್ಪ ಉದ್ದಗಿದ್ದ ಪೋರ ಸಚಿನ್, ಶಿವಾಜಿ ಪಾರ್ಕ್ ಅಂಗಣದಲ್ಲಿ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ರು.. ಗುರು ರಮಕಾಂತ್ ಅಚ್ರೇಕರ್ ಹೇಳಿಕೊಡುವ ಒಂದೊಂದು ಟಿಪ್ಸ್ ಗಳಿಂದ ಪ್ರೇರಿತನಾದ ಸಚಿನ್ ತನ್ನ ಬದುಕಿನ ಬಗ್ಗೆ ಸುಂದರ ಕನಸುಗಳನ್ನ ಕಾಣತೊಡಗಿದ್ರು. ಅದನ್ನು ನನಸಾಗಿಸಲು ಬಾಲಕ ಸಚಿನ್ ಹಲವು ಸವಾಲುಗಳನ್ನ ಎದುರಿಸಬೇಕಾಯ್ತು. ಒಂದೊಂದು ಸವಾಲುಗಳನ್ನ ದಾಟಿ ಬರುವಾಗ ಸಾಕಷ್ಟು ನಿರಾಸೆ ಅನುಭವಿಸಿದ್ರೂ ಛಲ ಮತ್ತು ಹಠವನ್ನ ಬಿಡಲಿಲ್ಲ.
ನಂತ್ರ ನಡೆದದ್ದು ಇತಿಹಾಸ.. ಸಿಂಹಾವಲೋಕನ ಮಾಡಿದಾಗ ಅಬ್ಬಾ ಅನ್ಸುತ್ತೆ..ಚೊಚ್ಚಲ ರಣಜಿ ಟ್ರೋಫಿ, ದುಲೀಪ್ ಟ್ರೋಫಿ, ಇರಾನಿ ಟ್ರೋಫಿಯಲ್ಲಿ ಶತಕ ಸಿಡಿಸಿದ ಬಾಲಕ ಸಚಿನ್ ಭಾರತ ಕ್ರಿಕೆಟ್ ತಂಡದ ಕದ ತಟ್ಟಿದ್ರು. ಫ್ಲೋ..
1989 ನವೆಂಬರ್ 15 .. ಮರೆತರೂ ಮರೆಯಲಾಗದ ದಿನ. ಮತ್ತೆ ಮತ್ತೆ ನೆನಪಿಗೆ ಬರುವ ದಿನ.. ಯಾಕಂದ್ರೆ, ಅದು, ವಿಶ್ವ ಕ್ರಿಕೆಟ್ ಸ್ಕೂಲ್‌ಗೆ ಮುನ್ನುಡಿ ಬರೆದ ದಿನ. ಕರಾಚಿಯಲ್ಲಿ ನಡೆದ ಇಂಡೋ-ಪಾಕ್ ಟೆಸ್ಟ್ ಪಂದ್ಯದಲ್ಲಿ 16ರ ಹರೆಯದ ಶಾಲಾ ಬಾಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿಕೊಟ್ಟ ದಿನ.
ಹೌದು, ಪಾಕ್‌ನ ವೇಗಿಗಳು ಸಚಿನ್‌ನ ಧೈರ್ಯವನ್ನ ಟೆಸ್ಟ್ ಮಾಡಲು ಶುರು ಮಾಡಿದ್ರು. ಬೌನ್ಸರ್, ಯಾರ್ಕರ್ ಎಸೆತಗಳಿಂದ ಎದೆಗುಂದುವಂತೆ ಮಾಡಿದ್ರು. ಆದ್ರೂ ಸಚಿನ್ ಹೆದರಲಿಲ್ಲ. ಬದಲಾಗಿ ಇದು ವಿಶ್ವ ಕ್ರಿಕೆಟ್‌ಗೆ ಸುಸ್ವಾಗತ ಅಂತ ಮನದಲ್ಲೇ ಅಂದುಕೊಂಡ್ರು.
ನಿಜ, ಮುಖಕ್ಕೆ ಏಟು ಮಾಡ್ಕೊಂಡ್ರೂ ಎದೆಗುಂದದ ವೀರ ಸೇನಾನಿ. . ರಕ್ತದ ಹನಿಗಳು ನೆಲಕ್ಕುರುಳಿದ್ರೂ ಅಂಜದ ಗಂಡು. ಕ್ರಿಕೆಟ್ ಆಟವನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸುವ ಹಠವಾದಿ. ತನ್ನ ಮಾಸ್ಟರ್ ಬ್ಲಾಸ್ಟರ್ ಆಟದಿಂದ ಅಭಿಮಾನಿಗಳನ್ನ ರಂಜಿಸುವ ಕಲಾಕಾರ. ರನ್‌ಗಳನ್ನ ಗುಡ್ಡೆ ಹಾಕಿದ ದಾಖಲೆವೀರ..
ಇಲ್ಲಿಯವರೆಗೆ 183 ಟೆಸ್ಟ್ ಪಂದ್ಯಗಳನ್ನ ಆಡಿರುವ ಸಚಿನ್ 57ರ ಸರಾಸರಿಯಲ್ಲಿ 15,086 ರನ್ ದಾಖಲಿಸಿದ್ದಾರೆ. ಇದ್ರಲ್ಲಿ ವಿಶ್ವದಾಖಲೆಯ 51 ಶತಕ ಹಾಗೂ 62 ಅರ್ಧಶತಗಳಿದ್ದು, 45 ವಿಕೆಟ್‌ಗಳನ್ನೂ ಕಬಳಿಸಿದ್ದಾರೆ.
ಹಾಗೇ, 453 ಏಕದಿನ ಪಂದ್ಯಗಳನ್ನ ಆಡಿರುವ ದಾಖಲೆ ವೀರ 45ರ ಸರಾಸರಿಯಲ್ಲಿ 18,111 ರನ್ ಗಳಿಸಿದ್ದಾರೆ. ಇದ್ರಲ್ಲಿ 48 ಶತಕ ಹಾಗೂ 95 ಅರ್ಧಶತಕಗಳಿವೆ. ಹಾಗೇ 154 ವಿಕೆಟ್‌ಗಳನ್ನ ಕಬಳಿಸಿದ್ದಾರೆ. ಇದೀಗ ಸಚಿನ್ ದಾಖಲೆಗೆ ಶತಕಗಳ ಶತಕ ದಾಖಲಿಸುವೊದೊಂದು ಮಾತ್ರ ಬಾಕಿ ಇದೆ. ಹಾಗೇ ಐಪಿಎಲ್ ನಲ್ಲೂ ಶತಕ ದಾಖಲಿಸುವ ಮೂಲಕ ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಶತಕ ದಾಖಲಿಸಿದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಆದ್ರೂ , ಸಚಿನ್ ರನ್ ದಾಹ ಮಾತ್ರ ಇನ್ನೂ ನೀಗಿಲ್ಲ. ಅದು ತಪ್ತ ಮನಸ್ಸಿನ ತಪ್ಪಸ್ಸಿನಂತೆ... ಸದಾ ಮಿಡಿಯುತ್ತಿರುವ ತುಮುಲ. ಇಂತಹ ಮನೋಭಾವನೆ ಸಚಿನ್‌ಗಿರಲು ಮಾತ್ರ ಸಾಧ್ಯ. ಯಾಕಂದ್ರೆ ಅಲ್ಲಿ ಮಾತಿಲ್ಲ.. ಬ್ಯಾಟ್ ಮೌನವಾಗಿಯೇ ಉತ್ತರ ನೀಡುತ್ತೆ. ಹಾಗೇ, ಅಹಂ ಇಲ್ಲ. ಬದ್ಧತೆ ಇದೆ. ಗಡಿಬಿಡಿ ಇಲ್ಲ.... ಏಕಾಗ್ರತೆ ಇದೆ. ಕ್ರಿಕೆಟ್ ಅಂದ್ರೆ ಇಷ್ಟೇನಾ ಅನ್ನೋ ಅಸಡ್ಡೆ ಇಲ್ಲ... ಕಲಿಯುವುದಕ್ಕೆ ಇನ್ನೂ ಇದೆ ಅನ್ನೋ ಪರಿಶ್ರಮವಿದೆ. ಇದು ಜೀನಿಯಸ್ ಆಟಗಾರನ ಸ್ಪೆಷಾಲಿಟಿ.
ಈಗಾಗಲೇ ಸುಮಾರು 75ಕ್ಕೂ ಅಧಿಕ ದಾಖಲೆಗಳು ಸದ್ದಿಲ್ಲದೆ ಸಚಿನ್ ಹೆಸರಿನಲ್ಲಿ ಅಂಟಿಕೊಂಡಿವೆ. ಹಾಗೇ ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳು ಸಚಿನ್ ಮುಡಿಗೇರಿವೆ. ಅದ್ರಲ್ಲೂ ಈಗ ಪ್ರತಿಷ್ಠಿತ ಭಾರತರತ್ನ ಪ್ರಶಸ್ತಿ ನೀಡಬೇಕು ಅನ್ನೋಕೂಗೂ ಜೋರಾಗಿಯೇ ಕೇಳಿಬರ್ತಿದೆ. ಕೇಂದ್ರ ಸರ್ಕಾರಕ್ಕೆ ಕಾನೂನಿನ ತೊಡಕು ಇರೋದರಿಂದ ಸಚಿನ್‌ಗೆ ಪ್ರಶಸ್ತಿನೀಡಲು ಸಾಧ್ಯವಾಗುತ್ತಿಲ್ಲ. ಆದ್ರೂ ಸಚಿನ್ ಭಾರತದ ಅನರ್ಘ್ಯ ರತ್ನ.
ಸಚಿನ್ ಗಳಿಸುವ ಪ್ರತಿಯೊಂದು ರನ್‌ನಲ್ಲೂ ಹೊಸತನವಿರುತ್ತೆ. ಕ್ರಿಕೆಟ್ ಕಲಿಯುವ ಚಿಣ್ಣರಿಗೆ ಸಚಿನ್ ಪಾಠಶಾಲೆಯಾದ್ರೆ, ಯುವ ಆಟಗಾರರಿಗೆ ಫ್ರೊಫೆಸರ್. ಹಾಗೇ,ವಿಶ್ವಕ್ರಿಕೆಟ್‌ಗೆ ಯೂನಿವರ್ಸಿಟಿ. ಅಷ್ಟರ ಮಟ್ಟಿಗೆ ಸಚಿನ್ ಕ್ರಿಕೆಟ್‌ನ ಪರಿಪೂರ್ಣ ಕಲಾವಿದರಾಗಿದ್ದಾರೆ. ಅದು ಏಕದಿನ ಪಂದ್ಯವೇ ಆಗಿರಲಿ, ಟೆಸ್ಟ್ ಪಂದ್ಯವೇ ಆಗಿರಲಿ.. ಅಥವಾ ಚುಟುಕು ಕ್ರಿಕೆಟ್ಟೆ ಆಗಿರಲಿ.. ಅಲ್ಲಿ ಸಚಿನ್ ಇದ್ರೆನೇ ಅಂದ... ಅವ್ರ ಆಟವನ್ನ ನೋಡೋದೆ ಚೆಂದ. ಯಾಕಂದ್ರೆ ಸಚಿನ್ ಅಭಿಮಾನಿಗಳ ಪಾಲಿಗೆ ಯಾವತ್ತಿಗೂ ಕ್ಲಾಸ್ ಆಂಡ್ ಮಾಸ್ ಹೀರೋ.
ಸನತ್ ರೈ
.
.
Thursday, November 17, 2011
Subscribe to:
Post Comments (Atom)
No comments:
Post a Comment