Thursday, November 17, 2011

ಕ್ರಿಕೆಟ್ ರಾಜನಿಗೆ ರಾಜಯೋಗ

ಸಚಿನ್‌ ತೆಂಡುಲ್ಕರ್‌...
ಕ್ರಿಕೆಟ್‌ ಜಗತ್ತಿನ ಅನಭಿಷಕ್ತ ಸಾರ್ವಭೌಮ. ಕಳೆದ 22 ವರ್ಷಗಳಿಂದ ಅಭಿಮಾನಿಗಳನ್ನ ರಂಜಿಸುತ್ತಿರುವ ಮೋಡಿಗಾರನ ಬಗ್ಗೆ ಇದಕ್ಕಿಂತ ಹೆಚ್ಚು ಏನನ್ನು ಹೇಳೋಕೇ ಸಾಧ್ಯವಿಲ್ಲ.

ಹೌದು, ಸಚಿನ್ ಬ್ಯಾಟಿಂಗ್‌ ವೈಖರಿಯೇ ಅಂತಹುದ್ದು...ಅಲ್ಲಿ ಕಲಾವಿದನ ತಾಳ್ಮೆಯೂ ಇದೆ. ಶಿವ ತಾಂಡವ ನೃತ್ಯದ ಆರ್ಭಟವೂ ಇದೆ. ಯಾಕಂದ್ರೆ ಇದು ದೇವ್ರ ಆಟ.

ಯಾರು ಏನೇ ಅಂದ್ರೂ, ಇಂತಹ ಆಟವನ್ನ ಆಡಲು ಸಾಮಾನ್ಯ ಮನುಷ್ಯನಿಂದ ಸಾಧ್ಯವಿಲ್ಲ. ಒಂದು ವೇಳೆ ಆಡುತ್ತಿದ್ರೆ ಎಲ್ರೂ ಸಚಿನ್ ತೆಂಡುಲ್ಕರೇ ಆಗಿರುತ್ತಿದ್ರು. ಆದ್ರೆ ಹಾಗಲಿಲ್ಲ. ಯಾಕಂದ್ರೆ ವಿಶ್ವಕ್ಕೆ ಒಬ್ಬನೇ ಸಚಿನ್ ತೆಂಡುಲ್ಕರ್‌. ಅದು ಆ ಬ್ರಹ್ಮ ಬರೆದ ಅಲಿಖಿತ ನಿಯಮ.
ತಪ್ತ ಮನಸ್ಸಿನಿಂದ ತಪಸ್ಸು ಮಾಡಿ ಕ್ರಿಕೆಟ್‌ ಆಟವನ್ನ ಕೈವಶ ಮಾಡ್ಕೊಂಡಿರುವ ಸಚಿನ್‌ ಕ್ರಿಕೆಟ್‌ ಜಗತ್ತಿನಲ್ಲಿ ಸೂರ್ಯನಂತೆ ಪ್ರಜ್ವಲಿಸುತ್ತಿದ್ದಾರೆ. ಸಚಿನ್ ತನ್ನ ಬ್ಯಾಟಿಂಗ್ ಕರಾಮತ್ತಿನಿಂದ ಕ್ರಿಕೆಟ್ ವಿಶ್ವದಲ್ಲಿ ತನ್ನ ಜಾತಕವನ್ನು ತಾವೇ ರಚಿಸಿಕೊಂಡಿದ್ದಾರೆ.

ಹೌದು. ವೃತ್ತಿ ಜೀವನವೆಂಬ ದಾರಕ್ಕೆ ಶತಕಗಳ ಮಣಿಯನ್ನು ಪೋಣಿಸುತ್ತಾ ಸಾಗುತ್ತಿರುವ ಮಾಸ್ಟರ್ ವಿಶ್ವ ಕ್ರಿಕೆಟ್ ನ ಅನರ್ಘ್ಯ ರತ್ನ.. ಅಹಂ ಅನ್ನೋ ಪದ ಈ ಮಹಾನ್ ಆಟಗಾರನತ್ತ ಸುಳಿದಿಲ್ಲ. ಪರಿಸ್ಥಿತಿ ಹೆಂಗೇ ಇರಲಿ, ಸಚಿನ್‌ ಮುಖದಲ್ಲಿ ಮಾತ್ರ ಅದೇ ಮುಗ್ಧತೆಯನ್ನ ಕಾಣಬಹುದು.

ಪ್ರತಿ ಪಂದ್ಯದಲ್ಲೂ ಸಚಿನ್ ಕ್ರಿಕೆಟ್ ನ ವಿದ್ಯಾರ್ಥಿಯಾಗ್ತಾರೆ..ಪ್ರತಿದಿನ ಹೊಸ ಪಾಠಗಳನ್ನು ಕಲಿಯುತ್ತಾರೆ. ಎದುರಾಳಿಯ ಪ್ರತಿ ಎಸೆತಗಳನ್ನು ಕೂಡ ಸೂಕ್ಷ್ಮವಾಗಿ ತಿಳಿದುಕೊಳ್ಳುತ್ತಾರೆ. ಸಚಿನ್ ರ ಈ ವಿಶೇಷ ಗುಣಗಳಿಂದಲೇ ವಿಶ್ವ ಕ್ರಿಕೆಟ್‌ನ ಮಾಸ್ಟರ್‌ ಆಗಿರೋದು..

ಇಷ್ಟೆಲ್ಲಾ ಮಾಡಿದ್ರೂ ಸಚಿನ್‌ ಸ್ವಂತದ್ದೊಂದು ಮನೆ ಕಟ್ಟಿರಲಿಲ್ಲ. ಆದ್ರೆ ಇದೀಗ ಸಚಿನ್ ಕನಸು ನನಸಾಗಿದೆ. ನವರಾತ್ರಿಯ ಮೊದಲ ದಿನವೇ ಹೊಸ ಮನೆಯ ಗೃಹ ಪ್ರವೇಶ ಮಾಡ್ಕೊಂಡಿದ್ದಾರೆ. ಆದ್ರೆ, ಗಡಿಬಿಡಿಯಿಂದ ಗೃಹ ಪ್ರವೇಶ ಮಾಡ್ಕೊಂಡಿರುವ ಸಚಿನ್‌, ಬೃಹತ್‌ ಮುಂಬೈ ಮಹಾ ನಗರ ಪಾಲಿಕೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೊಸ ಮನೆಗೆ ಮಾನ್ಯತಾ ಪತ್ರ ಪಡೆಯದ ಕಾರಣ 4.75 ಲಕ್ಷ ದಂಡ ಕಟ್ಟುವಂತೆ ಮುಂಬೈ ಪಾಲಿಕೆ ನೋಟಿಸ್‌ ಜಾರಿ ಮಾಡಿದೆ.

ಅದೇನೂ ಇದ್ರೂ, ನವರಾತ್ರಿಯ ಮೊದಲ ದಿನ ಸಚಿನ್‌ ಹೊಸ ಮನೆಗೆ ಎಂಟ್ರಿಕೊಟ್ಟಿರುವುದು ಶುಭ ಸೂಚನೆ. ಕ್ರಿಕೆಟ್‌ ಜಗತ್ತಿನಲ್ಲಿ ಸಚಿನ್‌ ಮತ್ತಷ್ಟು ಮಿಂಚು ಹರಿಸ್ತಾರೆ. ಯಾಕಂದ್ರೆ ಸಚಿನ್‌ಗೆ ರಾಜ ಯೋಗ ಮತ್ತು ಕುಮಾರ ಯೋಗವಿದೆಯಂತೆ. ಹಾಗಂತ ಸಚಿನ್ ಜಾತಕವೇ ಹೇಳುತ್ತೆ ಎಂಬುದು ಖ್ಯಾತ ಜ್ಯೋತಿಷಿ ಬೆಜಾನ್‌ ದರುವಾಲಾ ಅವ್ರ ಭವಿಷ್ಯ ನುಡಿ.

ರಾಜಯೋಗ ಮತ್ತು ಕುಮಾರ ಯೋಗ ಸಿಗೋದು ಕೆಲವೇ ಕೆಲವು ಮಂದಿಗೆ ಮಾತ್ರ. ಮುಖೇಶ್‌ ಅಂಬಾನಿ, ನರೇಂದ್ರ ಮೋದಿ, ಬರಾಕಾ ಒಬಾಮಾ ಮತ್ತು ಅಟಲ್‌ ಬಿಹಾರಿ ವಾಜಪೇಯಿ ಮೊದಲಾದವರ ಜಾತಕಗಳಲ್ಲೂ ರಾಜಯೋಗ ಮತ್ತು ಕುಮಾರ ಯೋಗವಿದೆ. ಇಂತವರು ತಮ್ಮ ಕ್ಷೇತ್ರಗಳಲ್ಲಿ ರೂಲ್‌ ಮಾಡ್ತಾರೆ ಅಂತಲೂ ಬೆಜಾನ್‌ ದರುವಾಲಾ ಹೇಳ್ತಾರೆ.

ಅಂದ ಹಾಗೇ, ಸಚಿನ್‌ ಭೂಮಿಯ ಸಂಕೇತ. ಆದ್ದರಿಂದಲೇ ತೆಂಡುಲ್ಕರ್‌ ಜನಪ್ರಿಯತೆಯ ಉತ್ತುಂಗಕ್ಕೇರಿದ್ದಾರೆ. ಭೂಮಿಯಂತೆ ಸಚಿನ್‌ ಕ್ರಿಕೆಟ್‌ ಮೈದಾನದಲ್ಲಿ ಸ್ಥಿರತೆಯಿಂದ ಇರುತ್ತಾರೆ. ಹಾಗೇ ಅವ್ರ ಜಾತಕ ನೀರಿನ ಸಂಕೇತವನ್ನ ತೋರಿಸುತ್ತೆ. ಇದ್ರಿಂದ ಅವ್ರ ಭವಿಷ್ಯ ಕೂಡ ನೀರಿನಂತೆ ತೇಲಾಡುತ್ತಿರುತ್ತೆ ಅಂತಾರೆ ದರುವಾಲಾ.

ಏನೇ ಆದ್ರೂ ಸಚಿನ್ ಜಾತಕವನ್ನ ಆ ಬ್ರಹ್ಮ, ಸ್ವಇಚ್ಚೆಯಿಂದ ಬರೆದಿರೋದು. ಆದ್ರೂ ಸಚಿನ್‌ ಭವಿಷ್ಯವನ್ನ ಯಾರು ಬರೆದ್ರೂ, ಯಾರು ಹೇಳಿದ್ರೂ ಅದನ್ನು ರೂಪಿಸಿದ್ದು ಮಾತ್ರ ಅವ್ರ ಸುಂದರ ಆಟ.
ಸನತ್ ರೈ

No comments:

Post a Comment