Thursday, November 17, 2011

ಅಂಗವಿಕಲ ಮಕ್ಕಳ ಜತೆ ರಾಜ್ಯ ಕ್ರಿಕೆಟಿಗರು..

ಅನಾಥರು... ಆದ್ರೂ ಇಲ್ಲಿ ಅನಾಥ ಪ್ರಜ್ಞೆ ಮೂಡಿಲ್ಲ. ತನ್ನವರು ಯಾರು ಇಲ್ಲ ಅನ್ನೋ ಕೊರಗಿಲ್ಲ. ಕನಸುಗಳು ಕಮರಿ ಹೋಗಿಲ್ಲ. ಬೆಳಕು ಕಾಣದಿದ್ರೂ ಬದುಕು ಕತ್ತಲಾಗಿಲ್ಲ. ನಿರೀಕ್ಷೆ – ಆಕಾಂಕ್ಷೆಗಳಿಗೆ ಎಲ್ಲೇ ಇಲ್ಲಿಲ್ಲ. ಹೌದು, ಮಾನವೀಯತೆಯ ನಂದಾದೀಪ. ಕತ್ತಲಿನಿಂದ ಬೆಳಕಿನಡೆಗೆ ಸಾಗುವ ನಿರಂತರ ಪಯಣ...

ಸಮರ್ಥನಂ ವಿಕಲ ಚೇತನರ ಸಂಸ್ಥೆ

ನಿಜ, ಈ ಬಾರಿಯ ದೀಪಾವಳಿ ಸಮಯ ಗೇಮ್‌ ಪ್ಲಾನ್‌ ತಂಡಕ್ಕೆ ವಿಭಿನ್ನ.. ವಿಶಿಷ್ಠ... ಸಮರ್ಥನಂ ವಿಕಲ ಚೇತನ ಮಕ್ಕಳ ಜತೆ ದೀಪಾವಳಿಯ ಸಡಗರವನ್ನ ಹಂಚಿಕೊಳ್ಳಬೇಕು ಅಂದಾಗ ರಾಜ್ಯದ ರಣಜಿ ಕ್ರಿಕೆಟಿಗರು ನಮ್ಮೊಂದಿಗೆ ಕೈಜೋಡಿಸಿದ್ರು. ಎನ್‌. ಸಿ. ಅಯ್ಯಪ್ಪ, ಸಿ.ಎಮ್‌. ಗೌತಮ್‌, ರಾಜು ಭಟ್ಕಳ್‌ , ಆದಿತ್ಯ ಸಾಗರ್‌ ಹಾಗೂ ಕೆ.ಬಿ.ಪವನ್‌ ಇಳಿ ಸಂಜೆಯ ವೇಳೆಗೆ ಸಮರ್ಥನಂ ಸಂಸ್ಥೆಗೆ ಎಂಟ್ರಿಕೊಟ್ರು. ಇನ್ನೊಂದೆಡೆ, ಈ ಅಂಧ ಮಕ್ಕಳಿಗೆ ಸ್ಪೂರ್ತಿ ನೀಡಲು ಚಿತ್ರನಟಿ ಸ್ಪೂರ್ತಿ ಬಂದಿದ್ರು.

ಅಂದ ಹಾಗೇ ನಮ್ಮ ಸಮಾಜದ ಕಣ್ಣಿಗೆ ಇವ್ರು ಅಂಧರು.. ಅನಾಥರು.. ಹಾಗಂತ ಇವ್ರ ಸಾಧನೆಗೆ ಯಾವುದು ಕೂಡ ಅಡ್ಡಿಯಾಗಿಲ್ಲ. ಸಾಧಿಸುವ ಛಲವಿದ್ದರೆ ಜಗತ್ತನ್ನೇ ಗೆಲ್ಲಬಹುದು. ಇದಕ್ಕೆ ಸಾಕ್ಷಿ ಶೇಖರ್‌

ಟೀಮ್‌ ಇಂಡಿಯಾದ ಅಂಧರ ಕ್ರಿಕೆಟ್‌ ತಂಡದ ನಾಯಕನಾಗಿರುವ ಶೇಖರ್‌ ಜತೆ ನಮ್ಮ ಕ್ರಿಕೆಟಿಗರು ಮಾತಿಗಿಳಿದ್ರು. ಮುಳ್ಳಿನ ಹಾದಿಯಲ್ಲಿ ನಡೆದು ಗುಲಾಬಿಯಂತೆ ಅರಳಿದ ಶೇಖರ್‌ ಅವ್ರ ಯಶೋಗಾಧೆ ನಿಜಕ್ಕೂ ಬೆರಗುಗೊಳಿಸುತ್ತೆ. ಬದುಕಿಗೆ ಅಂಧತ್ವ ಕಾಡಿದ್ರೂ, ಶೇಖರ್‌ ಗೆ ಕ್ರಿಕೆಟ್‌ ಆಟ ಹೊಸ ಬೆಳಕನ್ನ ಮೂಡಿಸಿದೆ. ಶೇಖರ್‌ ಯಶಸ್ಸಿನ ಕಥೆಯನ್ನ ಕೇಳಿದಾಗ ಕ್ರಿಕೆಟಿಗರ ಮನಸ್ಸು ಕರಗಿ ಹೋಯ್ತು.

ಇನ್ನು, ಮಕ್ಕಳನ್ನ ಕಂಡಾಗ ಹೃದಯ ಮಿಡಿಯಬಹುದು. ಆದ್ರೆ ಈ ಮಕ್ಕಳ ಬಗ್ಗೆ ದಯ-ದಾಕ್ಷಿಣ್ಯ, ಕರುಣೆ ಯಾವುದು ಬೇಡ. ಬೇಕಾಗಿರುವುದು ಕೇವಲ ಪ್ರೀತಿ, ಪ್ರೋತ್ಸಾಹ ಮಾತ್ರ.ಯಾಕಂದ್ರೆ ಈ ಪುಟಾಣಿಗಳಿಗೂ ಗೊತ್ತು. ತಮಗೆ ಅಪ್ಪ- ಅಮ್ಮನ ಪ್ರೀತಿ ಇಲ್ಲ.. ಅಜ್ಜ – ಅಜ್ಜಿಯ ವಾತ್ಸಲ್ಯವಂತೂ ಇಲ್ಲವೇ ಇಲ್ಲ. ತಾವು ತಬ್ಬಲಿಗಳು ಅಂತ ಗೊತ್ತಿದ್ರೂ ಅದ್ರ ಅರಿವು ಕೂಡ ಇಲ್ಲ. ಆದ್ರೆ ಇಲ್ಲಿ ಪರಿಶುದ್ಧವಾದ ಸ್ನೇಹವಿದೆ. ಯಾವುದೇ ರೀತಿಯ ಕಲ್ಮಶವಿಲ್ಲ. ಪುಟಾಣಿ ಮಕ್ಕಳಾದ್ರೂ ಪರಸ್ಪರ ಒಬ್ಬರನೊಬ್ಬರನ್ನ ಅರ್ಥಮಾಡಿಕೊಂಡು ಹೆಗಲಿಗೆಹೆಗಲುಕೊಟ್ಟು ಸಾಗೋ ಛಲವಿದೆ. ನಾವೆಲ್ಲಾ ಒಂದೇ ಅನ್ನೋ ಭಾವಕೈತೆಯಬದುಕು ಸಾಗಿಸ್ತಿದ್ದಾರೆ.

ಮಕ್ಕಳಿಗೆ ಸ್ಪೂರ್ತಿ ಸ್ಪೂರ್ತಿಯಾದ್ರು. ಜತೆಗೆ ಕ್ರಿಕೆಟಿಗರು ಪುಟಾಣಿಗಳ ಪ್ರಶ್ನೆಗಳಿಗೆ ಉತ್ತರ ನೀಡ್ತಾ ತಾವು ಮಕ್ಕಳ ಜತೆ ಆಟವಾಡಿದ್ರು. ಕುಣಿ, ಕುಣಿ, ನಲಿ ನಲಿ ಅಂತ ಮಕ್ಕಳ ಜತೆಗೆ ಬೆರೆತಾಗ ಟೈಮ್ಪಾಸ್‌ ಆಗಿದ್ದೇ ಗೊತ್ತಾಗಲಿಲ್ಲ. ಹಾಗೇ, ಅಂಧ ಬಾಲಕಿಯಯರಂತೂ ಅಂದುಕೊಂಡಿದ್ದನ್ನು ಸಾಧಿಸುವ ಛಲದಲ್ಲಿದ್ದಾರೆ. ಜಗತ್ತು ಕತ್ತಲಾಗಿದ್ರೂ ತಮ್ಮ ಬದುಕಿನಲ್ಲಿ ಬೆಳಕಿನ ಹೊಂಗಿರಣವನ್ನ ಕಾಣ್ತಾ ಇದ್ದಾರೆ. ಬದುಕೇ ಒಂದು ಹೋರಾಟ ಅಂತ ಜೀವನ ಸಾಗಿಸ್ತಾ ಇದ್ದಾರೆ. ಹಾಡಿನಿಂದಲೇ ತಮ್ಮ ನೋವು , ಬೇಸರವನ್ನ ಮರೆಯುವ ಪ್ರಯತ್ನ ನಡೆಸ್ತಾ ಇದ್ದಾರೆ.ಯಾರು ಏನೇ ಅಂದ್ರೂ ಇವ್ರಿಗೆ ಇವ್ರೆ ಸ್ಪೂರ್ತಿ. ಇವ್ರೆ ಪ್ರೇರಣೆ. ಮುಂದೇನು ಅನ್ನೋದನ್ನ ನೋಡಲು ಕಷ್ಟವಾದ್ರೂ ಮುಂದೆ ಹೋಗುವ ಪ್ರಯತ್ನ ಇದ್ದೇ ಇದೆ.

ಕ್ರಿಕೆಟಿಗರ ಜತೆ ಖುಷಿಯನ್ನು ಹಂಚಿಕೊಂಡ ಈ ಮಕ್ಕಳ ಸಂತಸಕ್ಕೆ ಪಾರವೇ ಇಲ್ಲ. ಎಲ್ಲರೊಂದಿಗೆ ಬೆರೆಯುತ್ತಿರುವಾಗ ಗೌತಮ್ ಮನಸೆಳೆದಿದ್ದು ಈ ಮನು..ಅಂಗ ವೈಕಲ್ಯದಿಂದ ಬಳಲುತ್ತಿರುವ ಮನುವನ್ನು ಕಂಡಾಗ ಗೌತಮ್ ಮನ ಮಿಡಿಯಿತು. ಕಾಲಿನ ವೈಕಲ್ಯತೆಗೆ ತುತ್ತಾಗಿರುವ ಮನು ಜೊತೆ ಗೌತಿ ಮಗುವಿನಂತೆ ಮಾತನಾಡಿದ್ರು...ಸದಾ ಮನೆ ಮಂದಿಯ ಜೊತೆ ಹಬ್ಬವನ್ನು ಆಚರಿಸುತ್ತಿದ್ದ ಈ ಆಟಗಾರರು ಮಕ್ಕಳೊಂದಿಗೆ ಸಂಪೂರ್ಣವಾಗಿ ಬೆರೆತ್ರು..ವಿಕಲ ಚೇತನ ಮಕ್ಕಳಿಗೆ ಆತ್ಮವಿಶ್ವಾಸವನ್ನು ತುಂಬಿದ್ರು. ಪ್ರೀತಿ, ಸ್ನೇಹದ ಖುಷಿ ಕೊಟ್ರು..ತಮಗೆ ಯಾರು ಇಲ್ಲ ಅನ್ನೋದನ್ನು ದೂರ ಮಾಡಿ ನಾವಿದ್ದೇವೆ ಅನ್ನೋದನ್ನು ಸಾರಿದ್ರು..

ಜೀವನದ ಕಲ್ಲು ಮುಳ್ಳಿನ ಹಾದಿಯಲ್ಲಿ ಈ ಪುಟಾಣಿಗಳು, ಬಾಲಕ,ಬಾಲಕಿಯರು ಎಡವದೇ, ಹೆದರದೇ ಬಾಳೋಂದು ಹೋರಾಟದ ಅಂತ ಮುಂದೆ ಸಾಗಲು ಹಾರೈಸಿದ್ರು..ಆಟಗಾರರು ಸ್ವತಃ ಮಕ್ಕಳ ಕೈಯಲ್ಲಿದ್ದ ದೀಪ ಬೆಳಗಿಸಿದ್ರು.ನಿಮ್ಮ ಬದುಕಿನಲ್ಲಿ ನಾವು ಬೆಳಕಿನ ಕಿರಣಗಳಾಗುತ್ತಿವೆ ಅಂತ ಹೇಳುವ ಮೂಲಕ ಭಾರವಾದ ಮನಸ್ಸಿನಿಂದಲೇ ಕ್ರಿಕೆಟಿಗರು ಹಿಂತಿರುಗಿದ್ರು. ಇವ್ರ ಬೆನ್ನ ಹಿಂದೆನೇ ಹೊರಬಂದ ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ರು. ಬಣ್ಣ ಬಣ್ಣದ ಚಿತ್ತಾರಗಳ ನಡುವೆಯೇ ವಿಕಲ ಚೇತನ ಮಕ್ಕಳು ಕುಣಿದು ಕುಪ್ಪಳಿಸಿದ್ರು.
ಒಟ್ಟಿನಲ್ಲಿ ಬೆಳಕಿನ ಹಬ್ಬದಲ್ಲಿ ಈ ಮಕ್ಕಳಿಗೆ ಕ್ರಿಕೆಟಿಗರು ಸ್ಪೂರ್ತಿಯಾದ್ರೆ, ತಮ್ಮ ಮಾನವೀಯತೆಯ ಗುಣದಿಂದ ಕ್ರಿಕೆಟಿಗರು ಹಲವರಿಗೆ ದಾರಿ ದೀಪವಾದ್ರು....

ಸನತ್ ರೈ

No comments:

Post a Comment