ಡಿಗೊ ಮರಡೋನಾ ಅವ್ರ ವರ್ಚಸ್ಸೆ ಅಂತಹುದ್ದು. ಫುಟ್‌ಬಾಲ್ ಆಟ ಮರಡೋನಾಗೆ ಬದುಕಿನ ಪಾಠ ಹೇಳಿಕೊಟ್ಟಿದೆ. ಬಡತನದಲ್ಲೇ ಅರಳಿದ ಮರಡೋನಾ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡಿದ್ರು. ಅದ್ಭುತ ಕಾಲ್ಚಳಕದಿಂದಲೇ ಮರಡೋನಾ ಫುಟ್‌ಬಾಲ್ ಜಗತ್ತನ್ನೇ ಬೆರಗುಗೊಳಿಸುವಂತೆ ಮಾಡಿದ್ರು. ಅಷ್ಟೇ ಅಲ್ಲ, ಕೋಟ್ಯಂತರ ಅಭಿಮಾನಿಗಳ ಎವರ್ ಗ್ರೀನ್ ಹೀರೋ..
ಆಟಗಾರನಾಗಿ ಮರಡೋನಾ ಎಲ್ಲಾ ಸಾಧನೆಗಳನ್ನ ಮಾಡಿದ್ದಾರೆ. ತನ್ನ ಆಟದಿಂದಲೇ ಮೋಡಿ ಮಾಡುವ ಈ ಮ್ಯಾಜಿಷಿಯನ್‌ನ ವೈಯಕ್ತಿಕ ಬದುಕನ್ನ ಅರ್ಥ ಮಾಡಿಕೊಳ್ಳುವುದು ತುಂಬಾನೇ ಕಷ್ಟ. ಯಾಕಂದ್ರೆ ಮರಡೋನಾಗೆ ಬಡತನದ ಬೇಗೆ ಏನೂ ಎಂಬುದು ಎಳೆವೆಯಲ್ಲಿ ಗೊತ್ತಿತ್ತು. ಆದ್ರೆ ಫುಟ್‌ಬಾಲ್ ಅವ್ರ ಬಡತನವನ್ನ ದೂರ ಮಾಡಿತ್ತು. ವಿಪರ್ಯಾಸ ಅಂದ್ರೆ, ಯಶಸ್ಸಿನ ಆಮಲು ಮರಡೋನಾ ಅವ್ರ ಬದುಕನ್ನ ಕವಲೋಡೆಯುವಂತೆ ಮಾಡಿತ್ತು.
ಹಠಮಾರಿ- ಛಲಗಾರ, ಮುಂಗೋಪಿಯಾಗಿರುವ ಡಿಗೋ ಯಾರನ್ನ ಕ್ಯಾರ್ ಮಾಡ್ತಾ ಇರಲಿಲ್ಲ. ಇದ್ರಿಂದ ವಿವಾದಗಳು ಅವ್ರ ಬೆನ್ನಿಗೆ ಅಂಟಿಕೊಂಡವು. ಆದ್ರೂ ಅರ್ಜೆಂಟಿನಾ ತಂಡಕ್ಕೆ ಹೊಸ ಚೈತನ್ಯ ನೀಡಿರುವ ಮರಡೋನಾ , 1986ರ ವಿಶ್ವಕಪ್ ಗೆಲುವಿನಲ್ಲಿ ಅವ್ರ ಏಕಾಂಗಿ ಹೋರಾಟ ಇನ್ನೂ ಕಣ್ಣ ಮುಂದೆ ಹಾದು ಹೋಗುತ್ತವೆ. ಅದ್ರಲ್ಲೂ ಇಂಗ್ಲೆಂಡ್ ವಿರುದ್ಧ ದಾಖಲಿಸಿದ ಎರಡು ಗೋಲುಗಳನ್ನ ಯಾವತ್ತೂ ಮರೆಯೋಕೆ ಸಾಧ್ಯವಿಲ್ಲ.
ಹಾಗಂತ ಡಿಗೋ ಮರಡೋನಾ ಕೇವಲ ಆಟಗಾರನಾಗಿ ಸುದ್ದಿ ಮಾಡಲಿಲ್ಲ. ಮೈದಾನದ ಹೊರಗೂ ಸುದ್ದಿಯ ಕೇಂದ್ರ ಬಿಂದುವಾಗಿದ್ರು. ಹೌದು, ಮರಡೋನಾ ಕುಡುಕ.. ಸಿಗರೇಟ್ ಸೇದುತ್ತಿದ್ರು. ಕೊಕೇನ್ ಸೇರಿದಂತೆ ಉದ್ದೀಪನಾದ್ರವ್ಯ ಸೇವನೆ ಮಾಡಿ ಕೊನೆಗೆ ತನ್ನ ವರ್ಣ ರಂಜಿತ ಫುಟ್‌ಬಾಲ್ ಬದುಕಿಗೆ ಅವ್ರೆ ಕೊಳ್ಳಿ ಇಟ್ಟುಕೊಂಡ್ರು. ಇನ್ನು, ಡಿಗೋಗೆ ಹುಡುಗಿಯರ ಸುತ್ತ ತಿರುಗುವ ಅಗತ್ಯವಿರಲಿಲ್ಲ. ಯಾಕಂದ್ರ ಆ ಕೆಲಸವನ್ನ ಹುಡುಗಿಯರೇ ಮಾಡ್ತಾ ಇದ್ರು. ಅಷ್ಟೊಂದು ರಸಿಕ ಶಿರೊಮಣಿ ಮರಡೋನಾ.
ಆದ್ರೂ ಮರಡೋನಾ ಅವ್ರ ಚಾರ್ಮ್ ಮಾತ್ರ ಕಮ್ಮಿಯಾಗಿರಲಿಲ್ಲ. ಈ ನಡುವೆ, ತೀರಾ ಮದ್ಯ ವ್ಯಸನಿಯಾಗಿದ್ದ ಡಿಗೋ ತನ್ನ ವೈಯಕ್ತಿನ ಬದುಕನ್ನ ಚಿತ್ರನ್ನವಾಗಿಸಿಕೊಂಡ್ರು. ಅತೀಯಾದ ದೇಹ ಭಾರ, ಹೊಟ್ಟೆನೋವಿನಿಂದ ಮರಡೋನಾ ಅವ್ರ ಆರೋಗ್ಯದಲ್ಲಿ ಏರುಪೇರಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ರು.
ಕೊನೆಗೂ ಚೇತರಿಸಿಕೊಂಡ ಡಿಗೋಮರಡೋನಾ ಅರ್ಜೆಂಟಿನಾ ಫುಟ್‌ಬಾಲ್ ತಂಡದ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ರು. ಆದ್ರೆ 2010ರ ವಿಶ್ವಕಪ್‌ನಲ್ಲಿ ಅರ್ಜೆಂಟಿನಾ ತಂಡ ನೀರಸ ಆಟವನ್ನಾಡಿದ ಕಾರಣ ಕೋಚ್ ಹುದ್ದೆಯಿಂದಲೂ ಕೆಳಗಿಳಿದ್ರು. ಈ ನಡುವೆ ಕೆಲವೊಂದು ವಿವಾದಾತ್ಮಕ ಹೇಳಿಕೆಗಳನ್ನ ನೀಡಿ ತನ್ನ ಹೆಸರಿಗೆ ಮತ್ತಷ್ಟು ಕಪ್ಪುಚುಕ್ಕೆಗಳನ್ನ ಸೇರಿಸಿಕೊಂಡ್ರು.
ಇದೀಗ ಮರಡೋನಾ ವಿವಾದವೊಂದಕ್ಕೆ ಸಿಲುಕಿಕೊಂಡಿದ್ದಾರೆ. ದುಬೈನ ಆಲ್ ವಾಸ್ಲ್ ಕ್ಲಬ್ ತಂಡದ ತರಬೇತುದಾರನಾಗಿರುವ ಡಿಗೋ ಅಭಿಮಾನಿಗೆ ಕಿಕ್ ನೀಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಇಟಿಸಾಲಾಟ್ ಟೂರ್ನಿಯ ವೇಳೆ ಅಭಿಮಾನಿಗಳ ಬ್ಯಾನರ್ ಮುಂದೆ ಮರಡೋನಾ ಪೋಟೋ ಶೂಟ್ ಮಾಡ್ತಾ ಇದ್ರು. ಆಗ ಹುಚ್ಚು ಅಭಿಮಾನಿಯ ಕಿತಾಪತಿ ಮರಡೋನಾ ಅವ್ರ ಪಿತ್ತ ನೆತ್ತಿಗೇರುವಂತೆ ಮಾಡಿತು. ಅಲ್ಲದೆ ಅಭಿಮಾನಿಗೆ ಕಾಲಿನಿಂದ ಒದ್ದುಬಿಟ್ರು.
ನಂತ್ರ ತಪ್ಪಿನ ಅರಿವಾದ ಮರಡೋನಾ ಕ್ಷಮೆಯಾಚಿಸಿದ್ರು. ನನ್ನ ಸ್ವಭಾವನೇ ಹಾಗೇ ಅಂತ ಹಾರಿಕೆಯ ಹೇಳಿಕೆಯನ್ನು ನೀಡಿದ್ರು. ಒಟ್ಟಿನಲ್ಲಿ ಡಿಗೋ ಮರಡೋನಾ ಮಾತ್ರ ಬದಲಾಗುವುದಿಲ್ಲ. ಯಾಕಂದ್ರೆ ವಿವಾದಗಳಿಗೆ ಸಿಲುಕುವುದು ಮರಡೋನಾ ಅವ್ರ ಹುಟ್ಟುಗುಣ.
ಸನತ್ ರೈ
Thursday, November 17, 2011
Subscribe to:
Post Comments (Atom)
No comments:
Post a Comment