ಡಾಕ್ಟರ್ ಮಹೇಂದ್ರ ಸಿಂಗ್ ಧೋನಿ... ಹಾಗಂತ ಅಚ್ಚರಿಪಡಬೇಡಿ.. ಯಾಕಂದ್ರೆ ಧೋನಿ ವೈದ್ಯನಲ್ಲ...ಹಾಗೇ ಸಂಶೋಧನೆ ಮಾಡಿ ಪದವಿ ಸಹ ಪಡ್ಕೊಂಡಿಲ್ಲ ಅಷ್ಟೇ ಯಾಕೆ ಡಿಗ್ರಿ ಕೂಡ ಕಂಪ್ಲೀಟ್ ಮಾಡಿಲ್ಲ. ಹೀಗಿದ್ರೂ ಧೋನಿ ಹೆಸರಿನ ಹಿಂದೆ ಡಾಕ್ಟರ್ ಅನ್ನೋ ಬಿರುದು ಕಂಗೋಳಿಸುತ್ತಿದೆ.
ಹೌದು, ಇಂಗ್ಲೆಂಡ್‌ನ ಡಿ ಮೊಂಟ್ ಫೋರ್ಟ್ ಯೂನಿವರ್ಸಿಟಿ ಧೋನಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಆದ್ರೆ ಇದು ಪಬ್ಲಿಸಿಟಿ ಸ್ಟಂಟ್ ಅಲ್ಲ. ಬದಲಾಗಿ ಧೋನಿಯ ಕ್ಯಾಪ್ಟನ್ಸಿ ಮತ್ತು ಎಬಿಲಿಟಿಗೆ ಸಂದ ಗೌರವ.
ಅಂದ ಹಾಗೇ, ವಿಶ್ವ ಕ್ರಿಕೆಟ್‌ನಲ್ಲಿ ಧೋನಿ ತನ್ನದೇ ಅದ ಚಾರ್ಮ್ ಅನ್ನು ಬೆಳೆಸಿಕೊಂಡಿದ್ದಾರೆ. ಪಂದ್ಯ ಸೋಲಲಿ.. ಗೆಲ್ಲಲಿ... ತಾಳ್ಮೆಯನ್ನ ಕಳೆದುಕೊಳ್ಳುವುದಿಲ್ಲ. ಇದಕ್ಕಾಗಿಯೇ ಕೂಲ್ ಕ್ಯಾಪ್ಟನ್ ಅಂತಲೂ ಬಿಂಬಿತವಾಗಿದ್ದಾರೆ. ಕಠಿಣ ಸಂದರ್ಭದಲ್ಲಿ ದಿಟ್ಟ ನಿರ್ಧಾರವನ್ನ ತೆಗೆದುಕೊಳ್ಳುವ ಧೋನಿ, ಒತ್ತಡಕ್ಕೆಲ್ಲಾ ಮಣಿಯುವುದಿಲ್ಲ. ಅದ್ರಲ್ಲೂ ಎದುರಾಳಿ ತಂಡದ ವೀಕ್‌ನೆಸ್‌ಗಳನ್ನ ಬಲು ಬೇಗನೇ ಅರ್ಥಮಾಡಿಕೊಳ್ಳುವ ಮಾಹಿ, ಗ್ಯಾಂಬಲ್ ಮಾಡ್ಕೊಂಡು ಪಂದ್ಯದ ಗತಿಯನ್ನ ಬದಲಾಯಿಸುವ ಚಾಣಕ್ಯ ಕೂಡ ಹೌದು.
ಧೋನಿ ತಂಡವನ್ನ ಮುನ್ನಡೆಸುವ ಪರಿಯೇ ಡಿಫರೆಂಟ್.. ವಿಕೆಟ್ ಕೀಪಿಂಗ್ ಜವಾಬ್ದಾರಿಯ ಜತೆಗೆ ಅಂಗಣದಲ್ಲಿ ಪ್ರಯೋಗ ಕೂಡ ನಡೆಸ್ತಾರೆ. ಇದ್ರಿಂದ ಎದುರಾಳಿ ತಂಡಕ್ಕೆ ಮಾಹಿಯ ಗೇಮ್ ಪ್ಲಾನ್‌ಗಳನ್ನ ಅರ್ಥ ಮಾಡ್ಕೊಳ್ಳುವುದು ತುಸು ಕಷ್ಟ. ಹಾಗೇ, ಧೋನಿ ಸಹ ಆಟಗಾರರ ಮೇಲೆ ಅಪಾರ ನಂಬಿಕೆಯನ್ನಿಟ್ಟುಕೊಳ್ಳುತ್ತಾರೆ. ಇದ್ರಿಂದ ಆಟಗಾರರು ಕೂಡ ನಾಯಕನ ನಂಬಿಕೆಯನ್ನ ಹುಸಿಗೊಳಿಸಬಾರದು ಅನ್ನೋ ರೀತಿಯಲ್ಲೇ ಹೋರಾಟ ನಡೆಸ್ತಾರೆ. ಇದುವೇ ಧೋನಿಯ ಗೆಲುವಿನ ಸೂತ್ರ.
ಇನ್ನು, 2011ರ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವನ್ನಂತೂ ಮರೆಯೋಕೆ ಸಾಧ್ಯವಿಲ್ಲ. ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ನಾಯಕನ ಆಟವನ್ನಾಡಿದ ಧೋನಿಯ ಬ್ಯಾಟಿಂಗ್ ವೈಖರಿಗೆ ಸಲಾಂ ಅನ್ನಲೇಬೇಕು. ಸೋಲಿನ ಆತಂಕಕ್ಕೆ ಸಿಲುಕಿದ ತಂಡವನ್ನ ಗೆಲುವಿನ ದಡ ಸೇರಿಸಿದ್ರು. ಅಲ್ಲದೆ ಗೆಲುವಿನ ರನ್‌ಗಾಗಿ ಸಿಕ್ಸರ್ ಬಾರಿಸಿ ಚೆಂಡನ್ನ ದಿಟ್ಟಿಸಿ ನೋಡುತ್ತಿದ್ದ ಧೋನಿಯ ಆ ಕಣ್ಣುಗಳು... ಬ್ಯಾಟ್ ಅನ್ನು ಗದೆಯಂತೆ ತಿರುಗಿಸಿಕೊಂಡು ಸಂಭ್ರಮಿಸಿದ ರೀತಿ.
ಅಬ್ಬಾ...ಎಂಥ ಅದ್ಭುತ ಆಟ... ಎಂಥ ಬ್ಯಾಟಿಂಗ್ ವೈಖರಿ... ನಾಯಕ ಅಂದ್ರೆ ಹಿಂಗಿರಬೇಕು ಅಂತ ಕ್ರಿಕೆಟ್ ಪಂಡಿತರ ಜತೆ ಅಭಿಮಾನಿಗಳು ಉದ್ಗರಿಸಿದ್ರು.
ನಿಜ, ಧೋನಿ ನಾಯಕನಾದ ಮೇಲೆ ತುಂಬಾನೇ ಬದಲಾದ್ರು. ಆಟದಲ್ಲಿ ಮತ್ತು ವ್ಯಕ್ತಿತ್ವದಲ್ಲಿ ಪ್ರಬುದ್ಧತೆ ಸಾಧಿಸಿದ್ರು. ಜತೆಗೆ ಮೈದಾನ ಮತ್ತು ಮೈದಾನದ ಹೊರಗಡೆ ನಾಯಕನ ಘನತೆಯನ್ನ ಕಾಯ್ದುಕೊಂಡ್ರು. ಕಿರಿಯ ಆಟಗಾರರ ಮೇಲಿನ ಪ್ರೀತಿ ಮತ್ತು ಹಿರಿಯ ಆಟಗಾರರಿಗೆ ನೀಡುವ ಗೌರವದಿಂದ ಟೀಮ್ಇಂಡಿಯಾವನ್ನ ಯಶಸ್ಸಿನ ಉತ್ತುಂಗಕ್ಕೇರಿದ್ರು.
ಇನ್ನೊಂದೆಡೆ, ತನ್ನ ಬ್ಯಾಟಿಂಗ್‌ನಲ್ಲಿ ಕಲಾತ್ಮಕತೆ ಇಲ್ಲದಿದ್ರೂ ಅಬ್ಬರದ ಬ್ಯಾಟಿಂಗ್ ಮೂಲಕ ಮಿಂಚು ಹರಿಸಿದ್ರು. ಅದ್ರಲ್ಲೂ ಧೋನಿಯ ಹೆಲಿಕಾಪ್ಟರ್ ಶಾಟ್ ಕ್ರಿಕೆಟ್ ಪ್ರಿಯರ ಮನ ಗೆದ್ದಿತ್ತು.
ಈ ನಡುವೆ, ಧೋನಿಯ ನಾಯಕತ್ವದ ಬಗ್ಗೆ ಸಂಶೋಧನೆ ಕೂಡ ನಡೆಯಿತ್ತು. ಮುಖ್ಯವಾಗಿ ಧೋನಿಯ ಬ್ರೈನ್ ಹೇಗೆಲ್ಲಾ ವರ್ಕ್ ಆಗುತ್ತೆ ಎಂಬುದರ ಬಗ್ಗೆ ಸಂಶೋಧಕರು ಸಂಶೋಧನೆ ನಡೆಸಲು ಮುಂದಾದ್ರು. ಅಷ್ಟರ ಮಟ್ಟಿಗೆ ಧೋನಿಯ ಲೀಡರ್‌ಶಿಪ್ ಕ್ವಾಲಿಟಿ ಫೇಮಸ್ .
ಆದ್ರೆ ಈಗ ಧೋನಿಗೆ ಏನಾಗಿದೆ. ಮಾಹಿಯ ಮಹಿಮೆ ಯಾಕೆ ಮಂಕಾಗಿದೆ. ಕೂಲ್ ಕ್ಯಾಪ್ಟನ್‌ಗೆ ಅದೃಷ್ಟ ಕೈಕೊಟ್ಟಿತ್ತಾ.. ಧೋನಿಯ ಅದೃಷ್ಟದಿಂದಲೇ ಟೀಮ್ ಇಂಡಿಯಾ ಶ್ರೇಷ್ಠ ತಂಡವಾಗಿ ಹೊರಹೊಮ್ಮಿರುವುದಾ... ಈ ಎಲ್ಲಾ ಪ್ರಶ್ನೆಗಳಿಗೆ ನಿಖರವಾದ ಉತ್ತರವಿಲ್ಲ.
ಯಾಕಂದ್ರೆ ಕಾಲಚಕ್ರ... ಮೇಲೇರಿದವನು ಕೆಳಗಿಳಿಯಲೇಬೇಕು. ಇದು ಜಗದ ನಿಯಮ ಕೂಡ ಹೌದು. ಯಶಸ್ಸಿನ ಉತ್ತುಂಗಕ್ಕೇರಿದ ಧೋನಿ ಸದ್ಯ ಹಿನ್ನಡೆ ಅನುಭವಿಸಿರಬಹುದು. ಹಾಗಂತ ಈಗ ಧೋನಿಯ ನಾಯಕತ್ವವನ್ನೇ ಪ್ರಶ್ನೆ ಮಾಡುವುದು ಸರಿಯಲ್ಲ. ಜಸ್ಟ್ ಬ್ಯಾಡ್ ಟೈಮ್ ಅಷ್ಟೇ. ಏನೇ ಆದ್ರೂ, ಧೋನಿ ಮುಂದಿನ ದಿನಗಳಲ್ಲಿ ಮತ್ತೆ ತಂಡವನ್ನ ಗೆಲುವಿನತ್ತ ಕೊಂಡೋಯ್ಯುತ್ತಾರೆ ಅನ್ನೋ ನಂಬಿಕೆ ಇದೆ. ಆಲ್ ದಿ ಬೆಸ್ಟ್ ಮಾಹಿ..
ಸನತ್ ರೈ
Sunday, February 19, 2012
Subscribe to:
Post Comments (Atom)
No comments:
Post a Comment