ವಿಶ್ವ ಕ್ರಿಕೆಟ್‌ನ ಕಲಾತ್ಮಕ ಆಟಗಾರ... ಕ್ರಿಕೆಟ್ ಜಗತ್ತಿನ ಬುದ್ಧ.. ಟೀಮ್ ಇಂಡಿಯಾದ ಗ್ರೇಟ್ ವಾಲ್... ಹುಟ್ಟಿದ್ದು ಮಹಾರಾಷ್ಟ್ರದಲ್ಲಿ... ಬದುಕನ್ನ ರೂಪಿಸಿಕೊಂಡಿರುವುದು ಬೆಂಗಳೂರಿನಲ್ಲಿ... ಹೌದು, ನಮ್ಮೂರಿನ ಹೆಮ್ಮೆಯ ಕ್ರಿಕೆಟಿಗನಿಗೆ ಇಂದು 39ನೇ ಹುಟ್ಟು ಹಬ್ಬದ ಸಂಭ್ರಮ...
ಸುಮಾರು 30 ವರ್ಷಗಳ ಹಿಂದೆ. ಬೆಂಗಳೂರಿನ ಇಂದಿರಾ ನಗರದ ಹುಡುಗ ಮುಂದೊಂದು ದಿನ ವಿಶ್ವದ ಶ್ರೇಷ್ಠ ಕ್ರಿಕೆಟಿನಾಗುತ್ತಾನೆ ಅಂತ ಯಾರು ಕೂಡ ಅಂದುಕೊಂಡಿರಲಿಲ್ಲ. ಯಾವುದೇ ಕ್ರೀಡೆಯ ಹಿನ್ನಲೆ ಇಲ್ಲದ ಕುಟುಂಬದಿಂದ ಬಂದಿರುವ ದ್ರಾವಿಡ್ ಅದೇಗೇ ಕ್ರಿಕೆಟ್ ಮೇಲೆ ಆಸಕ್ತಿ ಬೆಳೆಯಿತ್ತೊ ಗೊತ್ತಿಲ್ಲ. ಮೊದ ಮೊದಲು ಹಾಕಿ ಆಡುತ್ತಿದ್ದ ದ್ರಾವಿಡ್ ಬಳಿಕ ಕ್ರಿಕೆಟ್ ಆಟವನ್ನ ಆಗಾಧವಾಗಿ ಪ್ರೀತಿಸಿದ್ರು .ಇಂದಿರಾ ನಗರದಿಂದ ಚಿನ್ನಸ್ವಾಮಿ ಕ್ರೀಡಾಂಣ, ಚಿನ್ನಸ್ವಾಮಿಯಿಂದ ಸೇಂಟ್ ಜೊಸೇಫ್ ಕಾಲೇಜ್ ಹೀಗೆ ಬಿಟಿಎಸ್ ಬಸ್‌ನಲ್ಲೇ ಓಡಾಡುತ್ತಿದ್ದ ದ್ರಾವಿಡ್ ಅದ್ಭುತ ಕ್ರಿಕೆಟಿಗನಾಗಿ ರೂಪುಗೊಂಡಿದ್ದು ಎಂಥವರನ್ನ ಬೆರಗುಗೊಳಿಸುತ್ತೆ.
ಹಾಗಂತ ರಾಹುಲ್ ದ್ರಾವಿಡ್‌ಗೆ ಭಾರತ ತಂಡದ ಬಾಗಿಲು ಅಷ್ಟೊಂದು ಸುಲಭವಾಗಿ ತೆರೆದಿರಲಿಲ್ಲ. ದೇಶಿ ಪಂದ್ಯಗಳಲ್ಲಿ ರನ್‌ಗಳ ಮಳೆ ಸುರಿಸಿದ್ರು. ಭಾರತ ತಂಡದಲ್ಲಿ ಸ್ಥಾನ ಪಡೆಯಲು ಹರಸಾಹಸಪಟ್ರು. ಕೊನೆಗೂ ಜಾಮಿಯ ಬಹುದಿನಗಳ ಕನಸು ನನಸಾಯ್ತು. ಅದೂ 1996 ಜೂನ್ 20 ರಂದು. ಕ್ರಿಕೆಟ್‌ನ ಐತಿಹಾಸಿಕ ಮೈದಾನ ಲಾಡ್ರ್ಸ್ ನಲ್ಲಿ ರಾಹುಲ್ ದ್ರಾವಿಡ್ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಭರ್ಜರಿಯಾಗಿಯೇ ಎಂಟ್ರಿಕೊಟ್ರು. ಮೊದಲ ಪಂದ್ಯದಲ್ಲೇ ಕೇವಲ ಐದು ರನ್‌ಗಳಿಂದ ಶತಕ ವಂಚಿತರಾದ್ರು. ನಂತ್ರ ವಿಶ್ವ ಕ್ರಿಕೆಟ್‌ನಲ್ಲಿ ಶುರುವಾಗಿದ್ದು ದ್ರಾವಿಡ್ ಪರ್ವ.
ಅಂದ ಹಾಗೇ, ಮುಳ್ಳಿನ ಹಾದಿಯಲ್ಲಿ ನಡೆದ ದ್ರಾವಿಡ್ ವಿಶ್ವ ಕ್ರಿಕೆಟ್‌ನಲ್ಲಿ ಹೂವಿನಂತೆ ಅರಳಿದ್ರು. ಆದ್ರೆ ಅದ್ರ ಹಿಂದಿನ ಪರಿಶ್ರಮ ದ್ರಾವಿಡ್‌ಗೆ ಮಾತ್ರ ಗೊತ್ತು.. ಯಾಕಂದ್ರೆ, ದ್ರಾವಿಡ್ ಬದುಕಿನಲ್ಲಿ ನಿರ್ದಿಷ್ಟವಾದ ಗುರಿ ಮತ್ತು ಕನಸನ್ನ ಕಟ್ಟಿಕೊಂಡಿದ್ರು. ಹಾಗೇ ಅದನ್ನ ಸಾಕಾರಗೊಳಿಸಲು ಸುರಿಸಿದ ಬೆವರಿನ ಹನಿಗಳ ಜತೆಗೆ ಬದ್ಧತೆ, ಏಕಾಗ್ರತೆ, ಶಿಸ್ತು ಜ್ಯಾಮಿಯನ್ನ ಮಹಾನ್ ಗೋಡೆ ಯಂತೆ ಬಿಂಬಿಸಿದವು. ಅಷ್ಟೇ ಅಲ್ಲ, ಗ್ರೇಟ್ ಇಂಡಿಯನ್ ವಾಲ್ ಅಂತಲೂ ಕ್ರಿಕೆಟ್ ಜಗತ್ತಿನಲ್ಲೇ ಚಿರಪರಿಚಿತರಾದ್ರು.. ಫ್ಲೋ
ತಾಳ್ಮೆಯ ಪ್ರತೀಕದಂತಿದ್ದ ದ್ರಾವಿಡ್ ಬೌಲರ್‌ಗಳನ್ನ ಮನ ಬಂದಂತೆ ಕಾಡುತ್ತಿದ್ರು. ಭಾರತ ತಂಡವನ್ನ ಸೋಲಿನಿಂದಲೂ ಬಚಾವ್ ಮಾಡ್ತಾ ಇದ್ರು. ಹಾಗೇ ನಿಧಾನಗತಿಯಾಗಿ ಬ್ಯಾಟಿಂಗ್ ಮಾಡುತ್ತಿದ್ರೂ ತಂಡದ ರೋಚಕ ಗೆಲುವಿಗೂ ಕಾರಣರಾಗುತ್ತಿದ್ರು. ಅದ್ರಲ್ಲೂ 2001ರಲ್ಲಿ ಆಸ್ಟ್ರೆಲಿಯಾ ವಿರುದ್ಧ ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಆಡಿದ ಪರಿಯನ್ನ ಯಾವತ್ತೂ ಮರೆಯೋಕೆ ಆಗೋಲ್ಲ. ಲಕ್ಷ್ಮಣ್ ಜತೆಗೂಡಿ ಆಸ್ಟ್ರೇಲಿಯನ್ನರ ಗರ್ವಭಂಗ ಮಾಡಿದ ದ್ರಾವಿಡ್ ರ ಬ್ಯಾಟಿಂಗ್ ವೈಖರಿ ಇಂದಿಗೂ ಸವಿ ಸವಿ ನೆನಪಾಗಿಯೇ ಉಳಿದಿದೆ.
ಹೌದು, ರಾಕೆಟ್ ವೇಗದ ಎಸೆತಗಳು ದ್ರಾವಿಡ್ ಬ್ಯಾಟ್ ಮುಂದೆ ಠುಸ್ಸು ಪಟಾಕಿಗಳಾಗುತ್ತವೆ. ಜತೆಗೆ ಬುಗುರಿಯಂತೆ ತಿರುಗುವ ಎಸೆತಗಳೂ ನಿಸ್ತೇಜವಾಗುತ್ತವೆ.. ಅಂತಹ ಮಾಂತ್ರಿಕತೆ ರಾಹುಲ್ ದ್ರಾವಿಡ್‌ರ ಬ್ಯಾಟಿಂಗ್‌ನಲ್ಲಿದೆ. ದ್ರಾವಿಡ್ ದಾಖಲಿಸುವ ಪ್ರತಿ ರನ್‌ಗಳಲ್ಲೂ ಒಂದೊಂದು ರೀತಿಯ ಕಲಾತ್ಮಕತೆ ಇದೆ. ಕ್ರಿಕೆಟ್‌ನ ಎಲ್ಲಾ ತಾಂತ್ರಿಕತೆ ಗಳನ್ನ ಮೈಗೂಡಿಸಿಕೊಂಡಿರುವ ರಾಹುಲ್, ಬ್ಯಾಟಿಂಗ್ ವೈಭವವನ್ನ ವರ್ಣಿಸುವುದು ತುಸು ಕಷ್ಟ. ಅಷ್ಟೇ ಅಲ್ಲ, ದ್ರಾವಿಡ್ ಅವ್ರ ಬ್ಯಾಟಿಂಗ್ ಶೈಲಿ ಯುವ ಆಟಗಾರರಿಗೆ ಕಲಾ ಶಾಲೆಯೇ ಸರಿ.
ಈಗಾಗಲೇ ಮಿಸ್ಟರ್ ಫರ್ಫೆಕ್ಟ್, ಮಿಸ್ಟರ್ ಡಿಪೆಂಡೆಬಲ್... ಅನ್ನೋ ಬಿರುದುಗಳು ಈ ಬೆಂಗಳೂರಿನ ಹುಡುಗನ ಹೆಸರಿನ ಮುಂದೆ ಅಂಟಿಕೊಂಡಿವೆ. ತಂಡಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿರುವ ದ್ರಾವಿಡ್ ಪಕ್ಕಾ ಟೀಮ್ ಪ್ಲೇಯರ್ ಅನ್ನೋದನ್ನ ಸಾಬೀತು ಪಡಿಸಿದ್ರು. ಮೇಸ್ತ್ರಿ ಇಟ್ಟಿಗೆಗಳನ್ನ ಜೋಡಿಸಿ ಗೋಡೆ ಕಟ್ಟುವ ಹಾಗೇ ರಾಹುಲ್ ಟೀಮ್ ಇಂಡಿಯಾದ ಮೇಸ್ತ್ರಿಯಾಗಿ ಎದುರಾಳಿ ತಂಡಗಳಿಗೆ ತಡೆ ಗೋಡೆಯಾದ್ರು.
ಸರಿ ಸುಮಾರು 15 ವರ್ಷಗಳ ಹಿಂದೆ ಟೀಮ್ ಇಂಡಿಯಾದೊಳಗೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಆಗಿ ಎಂಟ್ರಿಕೊಟ್ಟ ಜ್ಯಾಮಿ, ಯಾವುದೇ ಕ್ರಮಾಂಕದಲ್ಲೂ ಆಡಲು ಸೈ ಎನಿಸಿಕೊಂಡಿದ್ರು.. ಇನ್ನು, ತಂಡದ ಇನಿಂಗ್ಸನ್ನೂ ಆರಂಭಿಸಿರುವ ದ್ರಾವಿಡ್, ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನ ಸಮರ್ಥವಾಗಿ ನಿಭಾಯಿಸಿದ್ರು. ಜತೆಗೆ ಪಾರ್ಟ್ ಟೈಮ್ ಬೌಲಿಂಗ್ ಕೂಡ ಮಾಡ್ತಾ ಇದ್ರು. ಫೀಲ್ಡಿಂಗ್‌ನಲ್ಲಂತೂ ದ್ರಾವಿಡ್ ಫರ್ಫಾಮೆನ್ಸ್ ಸೂಪರ್.
ಅಂದ ಹಾಗೇ, ಆರಂಭದ ದಿನಗಳಲ್ಲಿ ದ್ರಾವಿಡ್ ಕೇವಲ ಟೆಸ್ಟ್ ಕ್ರಿಕೆಟಿಗ ಅನ್ನೋ ಹಣೆಪಟ್ಟಿಯನ್ನು ಪಡೆದಿದ್ರು. ಏಕದಿನ ಪಂದ್ಯಗಳಿಗೆ ಬಂದು ಹೋಗುತ್ತಿದ್ದ ರಾಹುಲ್ ಸಾಕಷ್ಟು ಟೀಕೆಗಳಿಗೂ ಗುರಿಯಾಗಿದ್ರು. ಆದ್ರೆ 1999ರ ವಿಶ್ವಕಪ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ದ್ರಾವಿಡ್ ಟೀಕೆ ಮಾಡಿದವರಿಗೆ ತಕ್ಕ ಉತ್ತರವನ್ನೇ ನೀಡಿದ್ರು. ನಂತ್ರ ಹಿಂತಿರುಗಿ ನೋಡಿದ್ದೇ ಇಲ್ಲ..
ಆದ್ರೆ 2007ರ ವಿಶ್ವಕಪ್ ದ್ರಾವಿಡ್ ಏಕದಿನ ಕ್ರಿಕೆಟ್ ಬದುಕಿಗೆ ಸುನಾಮಿಯಂತೆ ಅಪ್ಪಳಿಸಿತ್ತು. ಆಟಗಾರರ ನಡುವಿನ ಗೊಂದಲ ... ಕೋಚ್ ಗ್ರೆಗ್ ಚಾಪೆಲ್ ದ್ವಂದ ನೀತಿಯಿಂದ ಕೆರೆಬಿಯನ್ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಮುಖಭಂಗ ಅನುಭವಿಸಿತ್ತು. ಇದ್ರಿಂದ ತೀರಾ ನೊಂದ ಜಾಮಿ, ತಂಡದ ನಾಯಕತ್ವವನ್ನ ತ್ಯಜಿಸಬೇಕಾಯ್ತು. ಜತೆಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಕಳಪೆ ಫಾರ್ಮ್ ದ್ರಾವಿಡ್‌ರನ್ನ ಏಕದಿನ ಕ್ರಿಕೆಟ್‌ನಿಂದ ದೂರ ಉಳಿಯುವಂತೆ ಮಾಡಿತ್ತು. ನಂತ್ರ ಏಕದಿನ ಪಂದ್ಯಗಳಲ್ಲಿ ಯುವ ಆಟಗಾರರ ದರ್ಬಾರಿನ ಮುಂದೆ ಜಾಮಿಯ ಕಲಾತ್ಮಕ ಆಟ ಮಸುಕಾಗಿಬಿಟ್ಟಿತ್ತು. ಇದ್ರಿಂದ 2011ರಲ್ಲಿ ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯವನ್ನ ಆಡುವ ಮೂಲಕ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ರು.
ಈಗಾಗಲೇ ರಾಹುಲ್ ದ್ರಾವಿಡ್ ಟ್ವೆಂಟಿ ಟ್ವೆಂಟಿ ಮತ್ತು ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದೀಗ ಟೆಸ್ಟ್ ಪಂದ್ಯವನ್ನ ಮಾತ್ರ ಆಡ್ತಾ ಇದ್ದಾರೆ. ಇದ್ರಿಂದ ಜಾಮಿ ತನ್ನ ವರ್ಣರಂಜಿತ ಕ್ರಿಕೆಟ್ ಬದುಕಿಗೆ ಯಾವಾಗ ವಿದಾಯ ಹೇಳ್ತಾರೆ ಅಂತ ಹೇಳೋಕೆ ಆಗಲ್ಲ. ಆದ್ರೂ ರಾಹುಲ್‌ಗೆ ಆಡುವ ಸಾಮರ್ಥ್ಯ ಇನ್ನೂ ಇದೆ. ಹಾಗಂತ ಇದಕ್ಕೆ ಬಿಸಿಸಿಐ ಎಷ್ಟರ ಮಟ್ಟಿಗೆ ಸ್ಪಂದಿಸುತ್ತೆ ಅನ್ನೋದು ಮುಖ್ಯವಾಗಿರುತ್ತೆ.
ನಿಜ, ರಾಹುಲ್ ದ್ರಾವಿಡ್ ರದ್ದು ವರ್ಣರಂಜಿತ ಕ್ರಿಕೆಟ್ ಬದುಕು. ಕ್ರಿಕೆಟ್ ಮೇಲಿನ ಆಗಾಧವಾದ ಪ್ರೀತಿ ಜಾಮಿಯನ್ನು ಉತ್ತುಂಗಕ್ಕೇರಿಸಿದೆ. ಕಲ್ಮಶವಿಲ್ಲದ ವ್ಯಕ್ತಿತ್ವ ದ್ರಾವಿಡ್ ಹೆಸರನ್ನ ಇನ್ನಷ್ಟು ಮೆರಗುಗೊಳಿಸಿದೆ. ಆದ್ರೆ ದ್ರಾವಿಡ್, ಎಷ್ಟೇ ಸಾಧನೆ, ಯಶಸ್ಸು, ದಾಖಲೆ ಮಾಡಿದ್ರೂ ಟೀಮ್ ಇಂಡಿಯಾದ ಸವಿ ಸವಿ ನೆನಪಿನ ಸಂಭ್ರಮದಲ್ಲಿರಲಿಲ್ಲ. 15 ವರ್ಷ ಟೀಮ್ ಇಂಡಿಯಾದಲ್ಲಿ ಆಡಿದ್ರೂ 2011ರ ವಿಶ್ವಕಪ್ ಗೆದ್ದ ತಂಡದಲ್ಲಿ ತಾನಿಲ್ಲ ಅನ್ನೋ ಬೇಸರ, ನಿರಾಸೆ, ನೋವು ದ್ರಾವಿಡ್‌ರನ್ನ ಸದಾ ಕಾಡುತ್ತಲೇ ಇರುತ್ತೆ.
ಇನ್ನು, ಕ್ಲಾಸ್... ಕಮೀಟ್‌ಮೆಂಟ್ ಆಂಡ್ ಕನ್ಷಿಸ್ಟೆನ್ಸಿ ಈ ಮೂರು ಪದಗಳು ದ್ರಾವಿಡ್ ಗೆ ಅನ್ವರ್ಥನಾಮ.. ಯಾಕಂದ್ರೆ ಕ್ರಿಕೆಟ್‌ನ ಎಲ್ಲಾ ಪಾಠಗಳನ್ನ ರಾಹುಲ್ ದ್ರಾವಿಡ್ ಅವ್ರ ಬ್ಯಾಟಿಂಗ್ ಮತ್ತು ವ್ಯಕ್ತಿತ್ವದಲ್ಲಿ ಕಾಣಬಹುದು. ದ್ರಾವಿಡ್ ಬ್ಯಾಟ್‌ನಿಂದ ಚಿಮ್ಮುವ ಚೆಂಡು ನೂಲಿನಿಂದ ಗೆರೆ ಎಳೆಯುವಂತೆ ಬೌಂಡರಿ ಗೆರೆ ದಾಟುತ್ತೆ. ಆಗ ಎದುರಾಳಿ ತಂಡದ ಆಟಗಾರರಿಗೆ ದ್ರಾವಿಡ್ ರ ಬ್ಯಾಟಿಂಗ್ ಕಲಾತ್ಮಕತೆಯನ್ನ ಕಣ್ಣುತುಂಬಿಕೊಳ್ಳುವ ಬಯಕೆ ಬಂದ್ರೂ ಅಚ್ಚರಿ ಏನಿಲ್ಲ.
ಈ ನಡುವೆ, ದ್ರಾವಿಡ್ ಟ್ವೆಂಟಿ ಟ್ವೆಂಟಿ ಕ್ರಿಕೆಟ್ ಯುವಕರ ಆಟ ಅಂತ ದೂರ ಸರಿದ್ರು. ಆದ್ರೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮಿಂಚು ಹರಿಸಿದ ದ್ರಾವಿಡ್ ಟ್ವೆಂಟಿ ಟ್ವೆಂಟಿ ಪಂದ್ಯ ಕೇವಲ ಹೊಡಿ ಬಡಿ ಆಟವಲ್ಲ. ಅನುಭವ ಮತ್ತು ತಾಂತ್ರಿಕತೆಯೂ ಬೇಕಾಗುತ್ತೆ ಎಂಬುದನ್ನ ಸಾಬೀತುಪಡಿಸಿದ್ರು. ಅಷ್ಟೇ ಅಲ್ಲ, ಕಳೆದ ವರ್ಷ, ಇಂಗ್ಲೆಂಡ್ ವಿರುದ್ಧ ಚೊಚ್ಚಲ ಹಾಗೂ ಕೊನೆಯ ಟ್ವೆಂಟಿ ಟ್ವೆಂಟಿ ಪಂದ್ಯವನ್ನೂ ಆಡಿ ಚುಟುಕು ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ರು. ಸದ್ಯ ಐಪಿಎಲ್ ಆಡುತ್ತಿರುವ ರಾಹುಲ್ ರಾಜಸ್ಥಾನರಾಯಲ್ಸ್ ತಂಡದ ನಾಯಕನಾಗಿದ್ದಾರೆ.
ಏನೇ ಆದ್ರೂ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಟೆಸ್ಟ್ ತಂಡಕ್ಕೆ ಇವತ್ತಿಗೂ ಅಪತ್ಭಾಂದವ. ಈಗಾಗಲೇ ಕ್ರಿಕೆಟ್ ಬದುಕಿನ ಮುಸ್ಸಂಜೆಯಲ್ಲಿರುವಾಗಲೂ ದ್ರಾವಿಡ್‌ರ ರನ್ ದಾಹ ಬತ್ತಿಲ್ಲ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಟೀಮ್ ಇಂಡಿಯಾದ ಮರ್ಯಾದೆ ಉಳಿಸಿದ್ದು ದಿ ಗ್ರೇಟ್ ವಾಲ್. ಹಾಗೇ ವಿಂಡೀಸ್ ವಿರುದ್ಧ ಗಮನ ಸೆಳೆಯುವಂತಹಪ್ರದರ್ಶನ ನೀಡಿದ್ರು. ಆದ್ರೆ ಯಾಕೋ ಆಸ್ಟ್ರೇಲಿಯಾ ಸರಣಿಯಲ್ಲಿ ಮಾತ್ರ ದ್ರಾವಿಡ್ ಆಟ ಅಂದುಕೊಂಡಂತೆ ನಡೆಯುತ್ತಿಲ್ಲ. ಆದ್ರೂ ದ್ರಾವಿಡ್ ತಪ್ಪುಗಳನ್ನ ಸರಿಪಡಿಸಿಕೊಂಡು ರನ್ ದಾಖಲಿಸುವುದರಲ್ಲಿ ಅನುಮಾನನೇ ಇಲ್ಲ.
ಮತ್ತೊಂದೆಡೆ, ದ್ರಾವಿಡ್ ಅನೇಕ ದಾಖಲೆಗಳನ್ನ ಸೃಷ್ಠಿಸಿದ್ದಾರೆ. ಈಗಾಗಲೇ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಹತ್ತು ಸಾವಿರಕ್ಕೂ ಅಧಿಕ ರನ್ ಪೂರೈಸಿದ ಹೆಗ್ಗಳಿಕೆ ದ್ರಾವಿಡ್ ಅವ್ರದ್ದು. ಸದ್ಯ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ ದಾಖಲಿಸಿದ ವಿಶ್ವದ ನಾಲ್ಕನೇ ಆಟಗಾರ ಹಾಗೂ ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಕಲೆ ಹಾಕಿದ ವಿಶ್ವದ ಎರಡನೇ ಆಟಗಾರನೂ ಹೌದು. ಜತೆಗೆ ಗರಿಷ್ಠ ಕ್ಯಾಚ್ ಹಿಡಿದ ಹಿರಿಮೆ ಸಹ ದ್ರಾವಿಡ್‌ಗೆ ಸಲ್ಲುತ್ತೆ.
ಏನೇ ಆದ್ರೂ. ಕಳೆದ 15 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನಲ್ಲಿ ದ್ರಾವಿಡ್ ಹೆಸರಿಗೆ ಎಲ್ಲೂ ಕಪ್ಪುಚುಕ್ಕೆ ಅಂಟಿಕೊಂಡಿಲ್ಲ. ಅಷ್ಟರ ಮಟ್ಟಿಗೆ ರಾಹುಲ್ ದ್ರಾವಿಡ್ ಫರ್ಪೆಕ್ಟ್. ತನ್ನ 39ರ ಹರೆಯದಲ್ಲೂ ಕ್ಲಾಸ್‌ಗೂ ಸೈ, ಮಾಸ್‌ಗೂ ಜೈ ಅನ್ನೋ ದ್ರಾವಿಡ್ ರಂತಹ ಆಟಗಾರನನ್ನು ವಿಶ್ವ ಕ್ರಿಕೆಟ್‌ಗೆ ಕೊಡುಗೆಯಾಗಿ ನೀಡಿದ ಹೆಮ್ಮೆ ಕರ್ನಾಟಕದ್ದು. ಎನಿ ವೇ ಹ್ಯಾಪಿ ಬರ್ತ್ ಡೇ ಜಾಮಿ.
ಸನತ್ ರೈ
Sunday, February 19, 2012
Subscribe to:
Post Comments (Atom)
No comments:
Post a Comment